ನವದೆಹಲಿ[ಫೆ.04]: ದೇಶದ ನಾನಾ ಭಾಗಗಳಲ್ಲಿ ಪೌರತ್ವ ಕಾಯ್ದೆ ಹಾಗೂ NRC ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಗೃಹ ಸಚಿವಾಲಯವು ಸದ್ಯ NRC ಜಾರಿಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಧಿಕೃತವಾಗಿ ಸಂಸತ್ತಿನಲ್ಲಿ ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲು . ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಂಗಳವಾರ ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಈ ಉತ್ತರ ನೀಡುತ್ತಾ 'ಈವರೆಗೆ ದೇಶವ್ಯಾಪಿ NRC ಜಾರಿಗೊಳಿಸುವ ವಿಚಾರವಾಗಿ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ' ಎಂದಿದ್ದಾರೆ.

ಏನಿದು ಪೌರತ್ವ ತಿದ್ದುಪಡಿ ಕಾಯ್ದೆ?

ಭಾರತದ ನೆರೆಯ ರಾಷ್ಟ್ರಗಳಿಂದ ಅಂದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ (ಸಕ್ರಮವಾಗಿ ಅಥವಾ ಅಕ್ರಮವಾಗಿ) 6 ಧಾರ್ಮಿಕ ಅಲ್ಪಸಂಖ್ಯಾತ (ಹಿಂದು, ಕ್ರಿಶ್ಚಿಯನ್‌, ಸಿಖ್‌, ಪಾರ್ಸಿ, ಜೈನ ಮತ್ತು ಬೌದ್ಧ) ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಮಸೂದೆಯೇ ಪೌರತ್ವ ತಿದ್ದುಪಡಿ ಕಾಯ್ದೆ-2019. ಹಳೆಯ ಕಾಯ್ದೆಯಲ್ಲಿ ವಿದೇಶಿಗರು ಕಾನೂನುಬದ್ಧವಾಗಿ ಭಾರತಕ್ಕೆ ವಲಸೆ ಬಂದು ಇಲ್ಲಿ 12 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ನೆಲೆಸಿದ್ದರೆ ಪೌರತ್ವ ಪಡೆಯಲು ಅರ್ಹರಾಗಿದ್ದರು.

ಆದರೆ ಹೊಸ ತಿದ್ದುಪಡಿ ಕಾಯ್ದೆಯಲ್ಲಿ ಭಾರತಕ್ಕೆ ಮೇಲಿನ ಮೂರು ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿದ್ದರೂ ಇಲ್ಲಿ 6 ವರ್ಷ ವಾಸವಿದ್ದರೆ ಆರು ಧರ್ಮೀಯರು ಭಾರತದ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ.

ತಿದ್ದುಪಡಿಯನುಸಾರ 2014ರ ಡಿಸೆಂಬರ್‌ 31ರ ಒಳಗೆ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರು ಭಾರತದ ಪೌರತ್ವ ಪಡೆಯಲು ಅರ್ಹರು. ಯಾವುದೇ ಸೂಕ್ತ ದಾಖಲೆ ಇಲ್ಲದಿದ್ದರೂ ಅವರು ಅರ್ಜಿ ಸಲ್ಲಿಸಬಹುದು. ಆದರೆ ಈ ರಾಷ್ಟ್ರಗಳಿಂದ ವಲಸೆ ಬಂದ ಮುಸ್ಲಿಮರಿಗೆ ಈ ಕಾಯ್ದೆಯು ಪೌರತ್ವ ನೀಡುವುದಿಲ್ಲ.

ಯಾರು ಅಕ್ರಮ ವಲಸಿಗರು?

ಪೌರತ್ವ ಕಾಯ್ದೆ-1955, ವಿದೇಶಿಗರ ಕಾಯ್ದೆ ಹಾಗೂ ಪಾಸ್‌ಪೋರ್ಟ್‌ ಕಾಯ್ದೆಗಳು ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರಿಗೆ ಪೌರತ್ವ ನೀಡುವಂತಿಲ್ಲ ಎಂದು ನಿರ್ಬಂಧಿಸಿವೆ. ಭಾರತದ ಸಂವಿಧಾನದ ಪ್ರಕಾರ ಕಾನೂನುಬದ್ಧ ಪಾಸ್‌ಪೋರ್ಟ್‌ ಅಥವಾ ಸೂಕ್ತ ದಾಖಲೆ ಇಲ್ಲದೆ ಭಾರತಕ್ಕೆ ನುಸುಳಿದವರು ಅಕ್ರಮ ವಲಸಿಗರು. ಹೀಗೆ ವಲಸೆ ಬಂದ 3 ದೇಶಗಳ 6 ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಪ್ರಸ್ತಾಪ ಹೊಸ ತಿದ್ದುಪಡಿಯಲ್ಲಿದೆ.