ನವದೆಹಲಿ: ಕೊರೋನಾ ವೈರಸ್‌ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನಡೆಸಲು ಕೇರಳ ಸರ್ಕಾರ ಇತರ ಎಲ್ಲಾ ರಾಜ್ಯಗಳಿಗಿಂತ ಮೊದಲೇ ಅನುಮತಿ ಪಡೆದುಕೊಂಡಿದ್ದರೂ ಈವರೆಗೆ ಒಬ್ಬರಿಗೂ ಚಿಕಿತ್ಸೆ ನೀಡಿಲ್ಲ. ಇದಕ್ಕೆ ಕಾರಣವೇನು ಗೊತ್ತೇ? ಕೇರಳದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳೇ ಸಿಗುತ್ತಿಲ್ಲ. ಕೇರಳದಲ್ಲಿ ಈಗ 123 ಸಕ್ರಿಯ ಪ್ರಕರಣಗಳಷ್ಟೇ ಇದ್ದು, 355 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಪ್ಲಾಸ್ಮಾ ಚಿಕಿತ್ಸೆ ನೀಡಲು ತಿರುವನಂತಪುರಂ ಮೂಲದ ಆಸ್ಪತ್ರೆಯೊಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯಿಂದ ಎರಡು ವಾರಗಳ ಹಿಂದೆ ಎಲ್ಲರಿಗಿಂತ ಮೊದಲೇ ಅನುಮತಿ ಪಡೆದುಕೊಂಡಿತ್ತು. ಆದರೆ, ಗಂಭೀರ ಸ್ಥಿತಿಗೆ ತಲುಪಿದ ರೋಗಿಗಳಿಗಷ್ಟೇ ಈ ಚಿಕಿತ್ಸೆ ನೀಡಬೇಕು ಎಂಬ ನಿಯಮ ಇದೆ. ಕೊರೋನಾ ನಿಯಂತ್ರಣಕ್ಕೆ ಬಂದಿರುವ ಕೇರಳದಲ್ಲಿ ಅಂತಹ ರೋಗಿಗಳೇ ಇಲ್ಲ. ಹೀಗಾಗಿ ಯಾರಿಗೂ ಪ್ಲಾಸ್ಮಾ ಥೆರಪಿ ನಡೆದಿಲ್ಲ.

ಪ್ಲಾಸ್ಮಾ ಚಿಕಿತ್ಸೆ ಅಕ್ರಮ: ಕೇಂದ್ರ ಆರೋಗ್ಯ ಸಚಿವಾಲಯದ ಎಚ್ಚರಿಕೆ!

ಈ ಹಿನ್ನೆಲೆಯಲ್ಲಿ ಕೇರಳದ ಬಳಿಕ ಅನುಮತಿ ಪಡೆದಿದ್ದ ದೆಹಲಿಯಲ್ಲಿ ರೋಗಿಯೊಬ್ಬರಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದ್ದು, ರೋಗಿ ಸಂಪೂರ್ಣ ಗುಣಮುಖವಾಗಿದ್ದಾನೆ. ಕರ್ನಾಟಕದಲ್ಲೂ ಪ್ಲಾಸ್ಲಾ ಚಿಕಿತ್ಸೆಯನ್ನು ಆರಂಭಿಸಲಾಗಿದೆ.

ಕರ್ನಾಟಕದಲ್ಲೂ ಇದೇ ಕತೆ:

ರಾಜ್ಯದಲ್ಲಿಯೂ ಪ್ಲಾಸ್ಮಾ ಚಿಕಿತ್ಸೆಗೆ ಈಗಾಗಲೇ ಸಿದ್ಧತೆಗಳನ್ನು ನಡೆಸಿದ್ದು, ಗುಣಮುಖರಾಗಿರುವ ವ್ಯಕ್ತಿಗಳು ಪ್ಲಾಸ್ಮಾ ದಾನ ಮಾಡಿದ್ದಾರೆ. ಆದರೆ ಚಿಕಿತ್ಸೆ ನೀಡಲು ಸೂಕ್ತ ರೋಗಿ ದೊರೆಯುತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರದ ಹಲವು ಮಾರ್ಗ ಸೂಚಿಗಳಿವೆ. ಇದರ ಅನ್ವಯ ಚಿಕಿತ್ಸೆ ನೀಡಲು ಸೂಕ್ತ ರೋಗಿ ಸಿಗದ ಕಾರಣ ರಾಜ್ಯದಲ್ಲಿ ಇನ್ನೂ ಪ್ಲಾಸ್ಮಾ ಚಿಕಿತ್ಸೆ ಆರಂಭಿಸಿಲ್ಲ ಎಂದರು.