ಇಂಟರ್ನೆಟ್‌ನಲ್ಲಿ ಜನ ಗೋಳು ತೋಡಿಕೊಂಡರೆ ಕೇಸು ಹಾಕ್ಬೇಡಿ| ಸರ್ಕಾರ, ಪೊಲೀಸ್ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ವಾರ್ನಿಂಗ್| ಜನರ ಬಾಯ್ಮುಚ್ಚಿಸಲು ಯತ್ನಿಸಿದರೆ ನ್ಯಾಯಾಂಗ ನಿಂದನೆ ಕೇಸ್
ನವದೆಹಲಿ(ಮೇ.01): ಕೊರೋನಾ ವೈರಸ್‌ನಿಂದ ಕಂಗೆಟ್ಟಜನರು ಇಂಟರ್ನೆಟ್‌ನಲ್ಲಿ ತಮ್ಮ ಗೋಳು ತೋಡಿಕೊಂಡರೆ ಯಾವುದೇ ಕಾರಣಕ್ಕೂ ಅವರ ಬಾಯ್ಮುಚ್ಚಿಸಲು ಯತ್ನಿಸಬೇಡಿ ಎಂದು ಕೇಂದ್ರ, ರಾಜ್ಯ ಸರ್ಕಾರಗಳು, ಅಧಿಕಾರಿಗಳು ಹಾಗೂ ಪೊಲೀಸ್ ಮುಖ್ಯಸ್ಥರಿಗೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಒಂದು ವೇಳೆ ಮುಕ್ತ ಮಾಹಿತಿಯ ಪ್ರಸರಣವನ್ನು ತಡೆಯಲು ಯತ್ನಿಸಿದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುತ್ತೇವೆ ಎಂದೂ ಎಚ್ಚರಿಕೆ ನೀಡಿದೆ.
ಜನರು ಆಕ್ಸಿಜನ್ ಕೊರತೆ, ಹಾಸಿಗೆಗಳ ಕೊರತೆ, ಔಷಧದ ಕೊರತೆ ಅಥವಾ ಡಾಕ್ಟರ್‌ಗಳ ಅಲಭ್ಯತೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದುಃಖ ವ್ಯಕ್ತಪಡಿಸಿದರೆ ಅವರು ಸುಳ್ಳು ಮಾಹಿತಿ ಹರಡುತ್ತಿದ್ದಾರೆಂದು ಭಾವಿಸಿ ಕೇಸು ದಾಖಲಿಸುವಂತಿಲ್ಲ. ನಮಗೆ ಜನರ ಧ್ವನಿಗಳು ಕೇಳಬೇಕು ಎಂದು ನ್ಯಾ
ಡಿ.ವೈ.ಚಂದ್ರಚೂಡ, ಎಸ್.ರವೀಂದ್ರ ಭಟ್ ಹಾಗೂ ಎಲ್.ನಾಗೇಶ್ವರ ರಾವ್ ಅವರ ಪೀಠ ಶುಕ್ರವಾರ ಸ್ಪಷ್ಟಮಾತುಗಳಲ್ಲಿ ಹೇಳಿದೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಆಕ್ಸಿಜನ್ ಕೊರತೆಯ ಬಗ್ಗೆ ಇಂಟರ್ನೆಟ್‌ನಲ್ಲಿ ಬರೆದ ವ್ಯಕ್ತಿಯೊಬ್ಬನ ವಿರುದ್ಧ ಆತ ಸುಳ್ಳು ಮಾಹಿತಿ ಹರಡುತ್ತಿದ್ದಾನೆಂದು ಆರೋಪಿಸಿ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕೇಸು ದಾಖಲಿಸಿತ್ತು. ಕೊರೋನಾ ಬಿಕ್ಕಟ್ಟಿನ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಶುಕ್ರವಾರದ ವಿಚಾರಣೆಯ ವೇಳೆ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿತು.
"
ದೇವಸ್ಥಾನದಲ್ಲಿ ಬೆಡ್ ಹಾಕಿ:
‘ಇದು ರಾಷ್ಟ್ರೀಯ ವಿಪತ್ತು’ ಎಂದು ಪುನರುಚ್ಚರಿಸಿದ ಕೋರ್ಟ್, ಕಳೆದ 70 ವರ್ಷದಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಗೆ ಸಾಕಷ್ಟುಬೆಡ್‌ಗಳ ವ್ಯವಸ್ಥೆ ಮಾಡಲು ಆಗಲಿಲ್ಲ. ಡಾಕ್ಟರ್‌ಗಳು, ವೈದ್ಯಕೀಯ ಸಿಬ್ಬಂದಿಗೇ ಬೆಡ್ ಸಿಗುತ್ತಿಲ್ಲ. ಹಾಸ್ಟೆಲ್‌ಗಳು, ದೇವಸ್ಥಾನಗಳು, ಚಚ್‌ರ್‍ಗಳು ಹಾಗೂ ಇತರ ಸ್ಥಳಗಳನ್ನು ಕೋವಿಡ್ ಕೇರ್ ಸೆಂಟರ್‌ಗಳಾಗಿ ಪರಿವರ್ತಿಸಿ. ನಿರ್ಲಕ್ಷಿತ ಬಡವರು ಹಾಗೂ ಎಸ್‌ಸಿ, ಎಸ್‌ಟಿಗಳ ಕತೆ ಏನಾಗಬೇಕು? ಅವರನ್ನು ಖಾಸಗಿ ಆಸ್ಪತ್ರೆಗಳ ಮರ್ಜಿಗೆ ಬಿಡಲು ಸಾಧ್ಯವೇ’ ಎಂದು ಇದೇ ವೇಳೆ ಕೋರ್ಟ್ ಸರ್ಕಾರಗಳನ್ನು ಪ್ರಶ್ನಿಸಿತು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
