ಎನ್ಐಟಿ ಸಂಶೋಧಕರು ಹಲಸಿನ ಸಾರ ಬಳಸಿ ನೀರಿನ ಫ್ಲೋರೈಡ್ ತೆಗೆಯುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಮತ್ತೊಂದೆಡೆ, ಚಿತ್ರದುರ್ಗದಲ್ಲಿ ಡೆಂಘೀ ಮತ್ತು ಚಿಕೂನ್ಗುನ್ಯಾ ನಿಯಂತ್ರಿಸಲು ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ನೀರು ನಿಲ್ಲುವ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ನವದೆಹಲಿ: ಒಡಿಶಾದ ರೂರ್ಕೆಲಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿ) ಸಂಶೋಧಕರು ಹಲಸಿನ ಸಾರವನ್ನು ಬಳಸಿ, ಕುಡಿಯುವ ನೀರಿನಿಂದ ಅಪಾಯಕಾರಿ ಹೆಚ್ಚುವರಿ ಫ್ಲೋರೈಡ್ ತೆಗೆದು ಹಾಕುವ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅದಕ್ಕೆ ಪೇಟೆಂಟ್ ಪಡೆದುಕೊಂಡಿದ್ದಾರೆ.
ನೀರಿನ ಫ್ಲೋರೈಡ್ ಮಾಯ
ಹಲಸಿನ ಹಣ್ಣಿನ ಸಾರದಿಂದ ಆಕ್ಟಿವೇಟೆಡ್ ಕಾರ್ಬನ್ ತಯಾರಿಸಿ, ಅದಕ್ಕೆ ಜಿರ್ಕೋನಿಯಮ್ ಸೇರಿಸುವ ಮೂಲಕ ಅದರ ಫ್ಲೋರೈಡ್ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ಈ ವಸ್ತು ಸುಮಾರು 10 ನಿಮಿಷಗಳಲ್ಲಿ ಶೇ 90 ಕ್ಕಿಂತ ಹೆಚ್ಚು ಫ್ಲೋರೈಡ್ ಅನ್ನು ತೆಗೆದುಹಾಕಿದೆ.
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಿಗೆ ಅತ್ಯಂತ ಕೈಗೆಟುಕುವ ದರದಲ್ಲಿ ಶುದ್ಧ ನೀರನ್ನು ಒದಗಿಸಲು ಸಹಕಾರಿಯಾಗಿದೆ. ಕೃಷಿ ತ್ಯಾಜ್ಯ ಎಂದು ಎಸೆಯಲಾಗುವ ಹಲಸಿನ ಸಾರ ಬಳಸಿಕೊಳ್ಳುವುದರಿಂದ, ಇದು ಪರಿಸರ ಮಾಲಿನ್ಯವನ್ನು ತಡೆಯುವ ಜೊತೆಗೆ ನೀರಿನ ಶುದ್ಧೀಕರಣಕ್ಕೆ ನೆರವಾಗಲಿದೆ ಎನ್ನುವುದು ಸಂಶೋಧಕರ ಅಭಿಪ್ರಾಯ.
ಡೆಂಘೀ ಹಾಗೂ ಚಿಕೂನ್ಗುನ್ಯ ನಿಯಂತ್ರಣ
ಚಿತ್ರದುರ್ಗದಲ್ಲಿ ಡೆಂಘೀ ಹಾಗೂ ಚಿಕೂನ್ಗುನ್ಯ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರ ಅತ್ಯಗತ್ಯವಾಗಿದೆ. ಹಠಾತ್ತನೆ ಬರುವ ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು, ಮೈ ನೋವು, ಕೀಲುಗಳಲ್ಲಿ ನೋವು, ವಾಕರಿಕೆ ಮತ್ತು ವಾಂತಿ ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಸಿಮೆಂಟ್ ತೊಟ್ಟಿಗಳು, ಪ್ಲಾಸ್ಟಿಕ್ ತೊಟ್ಟಿಗಳು, ಬಕೆಟ್ಗಳು, ಡ್ರಂಗಳು, ಬ್ಯಾರಲ್ಗಳು, ಖಾಲಿ ಡಬ್ಬಗಳು, ಏರ್ಕೂಲರ್ಗಳು, ಗಡಿಗೆ, ಗಡಿಗೆ ತುಂಡುಗಳು, ತೆಂಗಿನ ಚಿಪ್ಪುಗಳು, ಹಳೆಯ ಹಾಗೂ ಒಡೆದ ಟೈರ್ಗಳು ಮತ್ತು ಹೂವಿನ ಕುಂಡಗಳ ತಟ್ಟೆಗಳು ಮುಂತಾದ ಸ್ವಚ್ಛ ನೀರು ನಿಲ್ಲುವ ಸ್ಥಳಗಳಲ್ಲಿ ಈ ಸೊಳ್ಳೆಗಳು ಹೇರಳವಾಗಿ ಉತ್ಪತ್ತಿಯಾಗುತ್ತವೆ.
ಎಲ್ಲಾ ನೀರಿನ ತೊಟ್ಟಿಗಳು, ಡ್ರಂ, ಬ್ಯಾರಲ್ಗಳು, ಏರ್ ಕೂಲರ್ ಇತ್ಯಾದಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಪಡಿಸಿ, ಮತ್ತೆ ಭರ್ತಿ ಮಾಡಿಕೊಳ್ಳುವುದು ಅಥವಾ ಮುಚ್ಚಳದಿಂದ ಮುಚ್ಚುವುದು ಅತ್ಯಗತ್ಯವಾಗಿದೆ. ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು ಮತ್ತು ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಸೊಳ್ಳೆ ನಿಯಂತ್ರಣ ಕ್ರಮಗಳಿಗೆ ಸಹಕಾರ ನೀಡುವುದು ಅವಶ್ಯ. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸುವುದು ಹಾಗೂ ಹಗಲಿನಲ್ಲಿ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರುವುದು ಉತ್ತಮ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.


