ನವದೆಹಲಿ[ಮಾ.11]: ಮಾ.20ರಂದು ಗಲ್ಲು ಶಿಕ್ಷೆಗೆ ಗುರಿಯಾಗಬೇಕಿರುವ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ದೋಷಿಯಾದ ವಿನಯ್‌ ಶರ್ಮಾ, ಸಾವನ್ನು ತಪ್ಪಿಸಿಕೊಳ್ಳುವ ಮತ್ತೊಂದು ಯತ್ನ ಮಾಡಿದ್ದಾನೆ. ತನಗೆ ಗಲ್ಲು ಶಿಕ್ಷೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಕೋರಿ ವಿನಯ್‌ ಶರ್ಮಾ, ದೆಹಲಿಯ ಉಪರಾಜ್ಯಪಾಲ ಅನಿಲ್‌ ಬೈಜಲ್‌ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.

ಅಪರೂಪದಲ್ಲಿ ಪ್ರಕರಣದಲ್ಲಿ ಮಾತ್ರವೇ ಗಲ್ಲು ಶಿಕ್ಷೆ ವಿಧಿಸಬೇಕು. ಹೀಗಾಗಿ ಈ ಪ್ರಕರಣದಲ್ಲಿ ತನಗೆ ಗಲ್ಲು ಶಿಕ್ಷೆ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ತನ್ನ ಸಣ್ಣ ವಯಸ್ಸು, ಸಾಮಾಜಿಕ- ಆರ್ಥಿಕ ಪರಿಸ್ಥಿತಿ ಮತ್ತು ಸುಧಾರಣೆಯ ಹಾದಿಯಲ್ಲಿನ ಅಂಶಗಳನ್ನು ಪರಿಗಣಿಸಿ ಕ್ಷಮಾದಾನ ನೀಡುವ ಮೂಲಕ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಬೇಕು ಎಂದು ಕೋರಿದ್ದಾನೆ.

ಈಗಾಗಲೇ ದೆಹಲಿಯ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಲಯ ಮಾ.20ರಂದು ಬೆಳಗ್ಗೆ ನಿರ್ಭಯಾ ಪ್ರಕರಣದ ನಾಲ್ವರೂ ದೋಷಿಗಳಿಗೆ ಗಲ್ಲು ಶಿಕ್ಷೆ ಜಾರಿಗೆ ಡೆತ್‌ವಾರಂಟ್‌ ಹೊರಡಿಸಿದೆ.