ಬೆಂಗಳೂರು[ಜ.09]: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ದೋಷಿಗಳಿಗೆ ಜನವರಿ 22 ರಂದು ಗಲ್ಲಿಗೇರಿಸಲು ದಿನಾಂಕ ನಿಗಧಿಯಾಗಿದೆ. ಈಗಾಗಲೇ ಡೆತ್ ವಾರಂಟ್ ಹೊರಡಿಸಲಾಗಿದ್ದು, ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲು ಎಲ್ಲಾ ರೀತಿಯ ತಯಾರಿ ಆರಂಭವಾಗಿದೆ. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿ ನಾಲ್ವರು ಅಪರಾಧಿಗಳನ್ನು ಒಂದೇ ಬಾರಿ ಗಲ್ಲಿಗೇರಿಸಲಾಗುತ್ತದೆ. ಹೀಗಿರುವಾಗ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಜವಾಬ್ದಾರಿಯನ್ನು ಯುಪಿ ಪೊಲೀಸರು ಹ್ಯಾಂಗ್‌ಮನ್ ಪವನ್‌ ಜಲ್ಲಾದ್‌ಗೆ ವಹಿಸಿದ್ದಾರೆ. ಸದ್ಯ ಮಗಳ ಮದುವೆ ತಯಾರಿಯಲ್ಲಿರುವ ಪವನ್‌ಗೆ ತಾನು 1 ಲಕ್ಷ ರೂಪಾಯಿ ನೀಡುವುದಾಗಿ ಕನ್ನಡ ನಟ ಜಗ್ಗೇಶ್ ಘೋಷಿಸಿದ್ದಾರೆ.

"

ನಿರ್ಭಯಾ ಗ್ಯಾಂಗ್ ರೇಪ್ ಕೇಸ್ ಸಾಗಿಬಂದ ಹಾದಿ..!

ಹೌದು ನಿರ್ಭಯಾ ಹತ್ಯಾಚಾರಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್‌ಮನ್ ತಮ್ಮ ಮಗಳ ಮದುವೆ ತಯಾರಿ ನಡೆಸುತ್ತಿದ್ದಾರೆ. ಪುಟ್ಟ ಮನೆಯಲ್ಲಿ ವಾಸಿಸುತ್ತಿರುವ ಪವನ್ ಮೈತುಂಬಾ ಸಾಲ ಮಾಡಿಕೊಂಡಿದ್ದು, ಮಗಳ ಮದುವೆಗೆ ಹಣ ಹೊಂದಿಸಲಾಗದೆ ಪರದಾಡುತ್ತಿದ್ದರು. ಹೀಗಿರುವಾಗ ಕೋರ್ಟ್ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ದಿನಾಂಕ ನಿಗಧಿ ಮಾಡಿದ್ದು, ದೇವರೇ ನನಗೆ ಅಪರಾಧಿಗಳನ್ನು ಗಲ್ಲಿಗೇರಿಸಲು ಅವಕಾಶ ನೀಡಿದ್ದಾನೆ. ಇದರಿಂದ ಬರುವ ದುಡ್ಡಿನಿಂದ ಮಗಳ ಮದುವೆಯನ್ನು ಮಾಡುತ್ತೇನೆ ಎಂದು ಪವನ್ ಹೇಳಿದ್ದಾರೆ.

ಪವನ್ ಕಷ್ಟ, ನೋವು ಹಾಗೂ ದುಃಖಭರಿತ ಕತೆ ಆಳಿಸಿದ ಕನ್ನಡದ ನವರಸನಾಯಕ ಜಗ್ಗೇಶ್ ತಾನೇ ಅವರಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಜಗ್ಗೇಶ್ 'ಮಾನ್ಯರೆ ರಾಕ್ಷಸ ಸಂಹಾರ ದೇವರ ನಿಯಮ!ಆ ಕಾರ್ಯದಿಂದ ಬರುವ ಹಣದಿಂದ ಮಗಳ ಮದುವೆ ಮಾಡುವೆ ಎಂದ ನಿಮ್ಮ ಅನಿಸಿಕೆ ಕೇಳಿ ಭಾವುಕನಾದೆ! ನೀವೆ ಆ ಪಾಪಿಗಳ ನೇಣಿಗೇರಿಸಿದರೆ ನಾನು ಕಲೆಯಿಂದ ದುಡಿದ 1ಲಕ್ಷ ರೂ ನಿಮಗೆ ದೇಣಿಗೆಯಾಗಿ ನಿಮ್ಮ ಮಗಳ ಮದುವೆಗೆ ನೀಡುವೆ! ಇಂದೆ ಆ ಹಣ ನಿಮಗಾಗಿ ಮೀಸಲಿಟ್ಟೆ! ದುರುಳ ನಿಗ್ರಹ ದೇವರ ಸೇವೆ! ಹರಿಓಂ...' ಎಂದು ಬರೆದಿದ್ದಾರೆ.

ಅತ್ತ ಗಲ್ಲಿಗೆ ಪ್ರ್ಯಾಕ್ಟೀಸ್, ಇತ್ತ ಆಪ್ತರ ಮೀಟಿಂಗ್ಸ್: INSIDE ತಿಹಾರ್!

ಪವನ್ ಜಲ್ಲಾದ್ ಕುಟುಂಬ ಕಳೆದ 50 ವರ್ಷಗಳಿಂದ ದೋಷಿಗಳನ್ನು ಗಲ್ಲಿಗೇರಿಸುವ ಕೆಲಸ ಮಾಡುತ್ತಾ ಬಂದಿದೆ. ಪವನ್ ಜಲ್ಲಾದ್‌ಗೆ ಐವರು ಹೆಣ್ಣು ಮಕ್ಕಳು ಹಾಗು ಇಬ್ಬರು ಗಂಡು ಮಕ್ಕಳಿದ್ದಾರೆ. ಈ ಪೈಕಿ ನಾಳ್ವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ.