ನವದೆಹಲಿ(ಜ.07): ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಹತ್ಯಾಚಾರ ಪ್ರಕರಣದಲ್ಲಿ ಕೊನೆಗೂ ಸಂತ್ರಸ್ಥೆಗೆ ನ್ಯಾಯ ದೊರೆತಿದೆ. ನಿರ್ಭಯಾ ಹತ್ಯಾಚಾರಿಗಳಿಗೆ ಡೆತ್ ವಾರೆಂಟ್ ಜಾರಿಗೊಳಿಸಿರುವ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ, ಜ.22ರ ಬೆಳಗ್ಗೆ 7 ಗಂಟೆಗೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಆದೇಶ ನೀಡಿದೆ.

ಡೆತ್ ವಾರೆಂಟ್ ಜಾರಿಗೊಳಿಸುವ ಕುರಿತು ಇಂದು ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಅಪರಾಧಿಗಳ ಪರ ವಕೀಲರು ನ್ಯಾಯಾಲಯದಲ್ಲಿ ಹೈಡ್ರಾಮಾ ನಡೆಸಿದರು. ಕೊನೆಯ ಹಂತದಲ್ಲಿ ಹೊಸ ವಕೀಲರನ್ನು ನೇಮಿಸಿಕೊಂಡಿದ್ದ ಅಪರಾಧಿಗಳು, ವಕೀಲರೊಂದಿಗೆ ತಮಗೆ ಭೇಟಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ನಾವು ನಮ್ಮ ಕಕ್ಷಿದಾರರೊಂದಿಗೆ ಸ ವಕೀಲರೊಂದಿಗೆ ಮಾತನಾಡಬೇಕಿದ್ದು, ಈ ಕಾರಣಕ್ಕೆ ವಿಚಾರಣೆಯನ್ನು ಮುಂದೂಡುವಂತೆ ಅಪರಾಧಿ ಪರ  ವಕೀಲರು ಆಗ್ರಹಿಸಿದರು. ಆದರೆ ಇದಕ್ಕೆ ಸೊಪ್ಪು ಹಾಕದ ನ್ಯಾಯಾಧೀಶರು, ನಾಲ್ವರೂ ಅಪರಾಧಿಗಳಿಗೆ ಡೆತ್ ವಾರೆಂಟ್ ಜಾರಿಗೊಳಿಸಿದರು.

ಇದಕ್ಕೂ ಮೊದಲು ವಿಚಾರಣೆಯನ್ನು ಮುಂದೂಡುವಂತೆ ಅಪರಾಧಿಗಳ ಪರ ವಕೀಲರು ಮನವಿ ಮಾಡಿಕೊಂಡಾಗ, ನಿರ್ಭಯಾ ಅವರ ತಾಯಿ ನ್ಯಾಯಾಲಯದಲ್ಲೇ ಕುಸಿದು ಬಿದ್ದರು. ಇದರಿಂದ ನ್ಯಾಯಾಲಯದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಯಿತು.

ಸದ್ಯ ನ್ಯಾಯಾಲಯದ ಆದೇಶಕ್ಕೆ ಸಂತಸ ವ್ಯಕ್ತಪಡಿಸಿರುವ ನಿರ್ಭಯಾ ಪಾಲಕರು, ಇಂದು ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಕಣ್ಣೀರಿಟ್ಟರು.

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೇ ನಿರ್ಭಯಾಳಿಗೆ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ಸಾವಿರಾರು ಜನರ ಸಂಭ್ರಮ ಮುಗಿಲು ಮುಟ್ಟಿತು.

ಆದರೂ ನಿರ್ಭಯಾ ಹತ್ಯಾಚಾರಿಗಳ ಪರ ವಕೀಲರಾದ ಎಪಿ ಸಿಂಗ್, ಇನ್ನೆರಡು ದಿನದಲ್ಲಿ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಕದ ತಟ್ಟುವುದಾಗಿ ಸ್ಪಷ್ಟಪಡಿಸಿದ್ದಾರೆ.

ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು ಬರೋಬ್ಬರಿ 2585 ದಿನಗಳ ಬಳಿಕ ನಿರ್ಭಯಾಳಿಗೆ ನ್ಯಾಯ ದೊರಕಿದ್ದು, ಇಂತಹ ರಾಕ್ಷಸೀ ಕೃತ್ಯವನ್ನು ನಡೆಸುವವರಿಗೆ ಸಮಾಜದಲ್ಲಿ ಬದುಕುವ ಹಕ್ಕಿಲ್ಲ ಎಂಬ ಸಂದೇಶವನ್ನು ನ್ಯಾಯಾಲಯ ರವಾನಿಸಿದೆ.

 

"