ನವದೆಹಲಿ[ಮ.17]: ನಿರ್ಭಯಾ ಗ್ಯಾಂಗ್‌ರೇಪ್‌ ಹಾಗೂ ಕೊಲೆ ಪ್ರಕರಣದ ದೋಷಿಗಳ ಗಲ್ಲು ಶಿಕ್ಷೆ ಜಾರಿಗೆ ಇನ್ನು 4 ದಿನ ಬಾಕಿ ಇರುವಂತೆಯೇ ಸೋಮವಾರ ಎರಡು ಮಹತ್ವದ ವಿದ್ಯಮಾನಗಳು ಜರುಗಿವೆ.

ಗಲ್ಲು ಶಿಕ್ಷೆ ವಿರುದ್ಧ ತಾನು ಕೋರ್ಟ್‌ನಲ್ಲಿ ಹೋರಾಡಲು ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ದೋಷಿ ಮುಕೇಶ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಆದರೆ, ಇದರ ಬೆನ್ನಲ್ಲೇ ನೇಣು ಶಿಕ್ಷೆ ಮುಂದೂಡಿಸಲು ಇನ್ನೊಂದು ಕುತಂತ್ರ ಹೂಡಿರುವ ದೋಷಿಗಳು, ಮರಣದಂಡನೆಗೆ ಕಡೆ ಕೋರಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿ ಅಚ್ಚರಿ ಮೂಡಿಸಿದ್ದಾರೆ.

ಅಂತಾರಾಷ್ಟ್ರೀಯ ಕೋರ್ಟ್‌ಗೆ ನಾಲ್ವರು ದೋಷಿಗಳ ಪೈಕಿ ಮೂವರಾದ ಅಕ್ಷಯ್‌ ಸಿಂಗ್‌, ಪವನ್‌ ಗುಪ್ತಾ ಹಾಗೂ ವಿನಯ್‌ ಶರ್ಮಾ ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ, ‘ಗಲ್ಲು ವಿರುದ್ಧ ಹೋರಾಡಲು ಮತ್ತೊಮ್ಮೆ ಅವಕಾಶ ನೀಡಬೇಕು. ಏಕೆಂದರೆ ನನ್ನ ವಕೀಲರು ನನ್ನ ದಾರಿ ತಪ್ಪಿಸಿದ್ದರು’ ಎಂದು ಮುಕೇಶ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತು. ‘ಮುಕೇಶ್‌ಗೆ ಈಗಾಗಲೇ ಎಲ್ಲ ಅವಕಾಶ ನೀಡಲಾಗಿತ್ತು. ಆತನ ಮರುಪರಿಶೀಲನಾ ಅರ್ಜಿ ಹಾಗೂ ಕ್ಯುರೇಟಿವ್‌ ಅರ್ಜಿ ಸೇರಿ ಎಲ್ಲ ಅರ್ಜಿ ವಜಾ ಆಗಿವೆ’ ಎಂದು ಹೇಳಿದ ಪೀಠ, ಆತನ ಹೊಸ ಕೋರಿಕೆ ತಿರಸ್ಕರಿಸಿತು.

ದಿಲ್ಲಿಯ ತಿಹಾರ್‌ ಜೈಲಿನಲ್ಲಿ ಮಾರ್ಚ್ 20ರ ಬೆಳಗ್ಗಿನ 5.30ಕ್ಕೆ ಈ ನಾಲ್ವರನ್ನೂ ಗಲ್ಲಿಗೇರಿಸಬೇಕು ಎಂದು ಇತ್ತೀಚೆಗೆ ಡೆತ್‌ ವಾರಂಟ್‌ ಜಾರಿಯಾಗಿತ್ತು.