ಕಾಸರಗೋಡು(ಏ.13): ಡಿಗ್ರಿ ವ್ಯಾಸಂಗ ಮಾಡುವುದಕ್ಕೂ ಹಣವಿಲ್ಲದೇ ರಾತ್ರಿಯ ವೇಳೆ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ರಾತ್ರಿಯ ಹೊತ್ತು ಕಾವಲುಗಾರನಾಗಿ ಕೆಲಸ ಮಾಡಿದ್ದ ವ್ಯಕ್ತಿ ಈಗ ಐಐಎಂನ ಸಹಾಯಕ ಪ್ರಾಧ್ಯಾಪಕ.

ಕೇರಳದ ಕಾಸರಗೋಡು ಮೂಲದ ರಂಜಿತ್‌ ರಾಮಚಂದ್ರನ್‌ ಅವರ ಯಶೋಗಾಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸದ್ಯ ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ರಾಮಚಂದ್ರನ್‌ ಶೀಘ್ರವೇ ಐಐಎಂ ರಾಂಚಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಏ.9ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದ ರಂಜಿತ್‌ ರಾಮಚಂದ್ರನ್‌, ತಾವು ಐಐಎಂ ಪ್ರಾಧ್ಯಾಪಕ ಹುದ್ದೆಗೆ ಏರಿದ್ದು ಹೇಗೆ ಎಂಬ ಬಗ್ಗೆ ಬರೆದುಕೊಂಡಿದ್ದರು. ಈ ಪೋಸ್ಟ್‌ ಹೀಗಿದೆ...

‘ಕಾಸರಗೋಡಿನ ಪಣತ್ತೂರಿನ ಸೇಂಟ್‌ ಪಿಯಸ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪದವಿ ಓದುತ್ತಿರುವ ವೇಳೆ ನಾನು ರಾತ್ರಿಯ ವೇಳೆ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ರಾತ್ರಿ ವಾಚ್‌ಮೆನ್‌ ಆಗಿ ಕೆಲಸ ಮಾಡುತ್ತಿದ್ದೆ. ಡಿಗ್ರಿಯಲ್ಲಿ ಉತ್ತಮ ಫಲಿತಾಂಶ ಬಂದಿದ್ದರಿಂದ ಐಐಟಿ ಮದ್ರಾಸ್‌ನಲ್ಲಿ ವ್ಯಾಸಂಗ ಮಾಡುವ ಅವಕಾಶ ಲಭ್ಯವಾಯಿತು. ಆದರೆ, ಮಲಯಾಳಂ ಭಾಷೆ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲದ ಕಾರಣ ಪಿಎಚ್‌ಡಿ ಅಧ್ಯಯನವನ್ನು ಅರ್ಧದಲ್ಲೇ ನಿಲ್ಲಿಸಲು ಯೋಚಿಸಿದ್ದೆ. ಆದರೆ, ನನ್ನ ಮಾರ್ಗದರ್ಶಕರಾಗಿದ್ದ ಡಾ. ಸುಭಾಷ್‌ ನನಗೆ ಉತ್ಸಾಹ ತುಂಬಿದರು. ನನ್ನ ಕನಸನ್ನು ಮುಂದುವರಿಸುವ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದೆ’ ಎಂದು ರಾಮಚಂದ್ರನ್‌ ಬರೆದುಕೊಂಡಿದ್ದರು. ಅಲ್ಲದೇ ತಾವು ಜನಿಸಿದ ಮನೆಯ ಫೋಟೋವನ್ನು ಹಾಕಿ ತಮ್ಮ ತಂದೆ ಟೈಲರ್‌ ವೃತ್ತಿಯಲ್ಲಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬ ಸಂಗತಿಯನ್ನೂ ರಾಮಚಂದ್ರನ್‌ ಬರೆದುಕೊಂಡಿದ್ದರು.

ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, 37,000ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್‌ ಅವರು ಸ್ವತಃ ರಾಮಚಂದ್ರನ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.