ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) 'ರಾಜಮಾರ್ಗಯಾತ್ರಾ' ಆ್ಯಪ್‌ನಲ್ಲಿ ಎರಡು ಹೊಸ ಸೌಲಭ್ಯಗಳನ್ನು ಪರಿಚಯಿಸಿದೆ. ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಆನ್‌ಲೈನ್ 'ಸ್ಥಳೀಯ ಪಾಸ್' ಮತ್ತು 22 ಭಾಷೆಗಳಲ್ಲಿ ಸಹಾಯ ನೀಡುವ 'ಮಾರ್ಗ್‌ಮಿತ್ರ' ಎಐ ಸಹಾಯವಾಣಿಯನ್ನು ಆರಂಭಿಸಿದೆ. ಈ ಸ್ಥಳೀಯ ಪಾಸ್ ಮೂಲಕ ₹350ಕ್ಕೆ ತಿಂಗಳಿಡೀ ಅನಿಯಮಿತವಾಗಿ ಪ್ರಯಾಣಿಸಬಹುದು.

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಮತ್ತು ಟೋಲ್ ಪ್ಲಾಜಾಗಳ ಸುತ್ತಮುತ್ತಲಿನ ನಿವಾಸಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ 'ಡಿಜಿಟಲ್ ಇಂಡಿಯಾ' ಮತ್ತು 'ಸುಲಭ ಜೀವನ ಸಾಗಣೆ' (Ease of Living) ದೃಷ್ಟಿಕೋನಕ್ಕೆ ಅನುಗುಣವಾಗಿ, ಪ್ರಾಧಿಕಾರವು ತನ್ನ ಅಧಿಕೃತ 'ರಾಜಮಾರ್ಗಯಾತ್ರಾ' (Rajmarg Yatra) ಮೊಬೈಲ್ ಆ್ಯಪ್‌ನಲ್ಲಿ ಎರಡು ಪ್ರಮುಖ ನಾಗರಿಕ ಕೇಂದ್ರಿತ ಸೌಲಭ್ಯಗಳನ್ನು ಪರಿಚಯಿಸಿದೆ. ಆನ್‌ಲೈನ್ ಮೂಲಕವೇ 'ಸ್ಥಳೀಯ ಪಾಸ್‌' (Local Pass) ವಿತರಣೆ ಮತ್ತು ಡಿಜಿಟಲ್ ಚಾಲಿತ 'ಮಾರ್ಗ್‌ಮಿತ್ರ' (Marg Mitra) ಸಹಾಯ ಕೇಂದ್ರವನ್ನು ಆರಂಭಿಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ವಲಯದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.

₹350 ಕ್ಕೆ ಸಿಗಲಿದೆ ಅನಿಯಮಿತ ಪ್ರಯಾಣದ ಪಾಸ್!

ಹೊಸದಾಗಿ ಪರಿಚಯಿಸಲಾದ 'ಲೋಕಲ್ ಪಾಸ್' ವೈಶಿಷ್ಟ್ಯವು ಅರ್ಹ ಪ್ರಯಾಣಿಕರು ಯಾವುದೇ ಟೋಲ್ ಪ್ಲಾಜಾಗೆ ಖುದ್ದಾಗಿ ಭೇಟಿ ನೀಡುವ ಅಗತ್ಯವಿಲ್ಲದೇ ಮೊಬೈಲ್ ಆ್ಯಪ್ ಮೂಲಕವೇ ಡಿಜಿಟಲ್ ರೂಪದಲ್ಲಿ ಟೋಲ್ ಪಾಸ್ ಖರೀದಿಸಲು ಅನುವು ಮಾಡಿಕೊಡುತ್ತದೆ. ನಿಗದಿತ ಟೋಲ್ ಪ್ಲಾಜಾದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ನಿವಾಸಿಗಳು ಈ ಸೌಲಭ್ಯ ಪಡೆಯಬಹುದು. ಸ್ಥಳೀಯರು ಕೇವಲ ₹350 ಪಾವತಿಸಿ ಡಿಜಿಟಲ್ ರೂಪದಲ್ಲಿ ಸ್ಥಳೀಯ ಪಾಸ್ ಖರೀದಿಸಬಹುದಾಗಿದೆ. ಈ ಪಾಸ್ ಪಡೆದರೆ ಆಯಾ ಟೋಲ್ ಪ್ಲಾಜಾಗಳ ಮೂಲಕ 1 ತಿಂಗಳ ಅವಧಿಗೆ ಎಷ್ಟು ಬಾರಿಯಾದರೂ ಅನಿಯಮಿತವಾಗಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ದೆಹಲಿಯ ಮುಂಡ್ಕಾದಲ್ಲಿ ಮೊದಲ ಪ್ರಯೋಗ

ಈ ಡಿಜಿಟಲ್ ಸ್ಥಳೀಯ ಟೋಲ್ ಪಾಸ್‌ನ ಮೊದಲ ಸೌಲಭ್ಯವನ್ನು ದೆಹಲಿಯ ಅರ್ಬನ್ ಎಕ್ಸ್‌ಟೆನ್ಶನ್ ರಸ್ತೆ-II (UER-II) ನಲ್ಲಿರುವ 'ಮುಂಡ್ಕಾ - ಬಕ್ಕರ್‌ವಾಲಾ' ಟೋಲ್ ಪ್ಲಾಜಾದಲ್ಲಿ ಪ್ರಾಯೋಗಿಕವಾಗಿ ಪರಿಚಯಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ದೇಶಾದ್ಯಂತದ ಇತರ ಎಲ್ಲಾ ಟೋಲ್ ಪ್ಲಾಜಾಗಳಲ್ಲೂ ಇದನ್ನು ವಿಸ್ತರಿಸಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ.

ಡಿಜಿಲಾಕರ್, ವಾಹನ್ ಮತ್ತು ಜಿಐಎಸ್ ಆಧರಿತ ತಂತ್ರಜ್ಞಾನ ಜೋಡಣೆ

ಹಿಂದಿನ ವ್ಯವಸ್ಥೆಯಲ್ಲಿ ಸ್ಥಳೀಯ ನಿವಾಸಿಗಳು ತಮ್ಮ ಅರ್ಹತೆ ಸಾಬೀತುಪಡಿಸಲು ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಟೋಲ್ ಪ್ಲಾಜಾಗಳಿಗೆ ಭೇಟಿ ನೀಡಿ ಗಂಟೆಗಟ್ಟಲೆ ಕಾಯಬೇಕಾಗಿತ್ತು. ಆದರೆ ಹೊಸ ಡಿಜಿಟಲ್ ವ್ಯವಸ್ಥೆಯಿಂದಾಗಿ ಆಫ್‌ಲೈನ್ ದಾಖಲಾತಿ ಪ್ರಕ್ರಿಯೆ ಸಂಪೂರ್ಣವಾಗಿ ತಪ್ಪಲಿದೆ.

ಈ ಉಪಕ್ರಮವು ಸರ್ಕಾರದ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ 'ಡಿಜಿಲಾಕರ್' (DigiLocker) ಮತ್ತು 'ವಾಹನ್' (Vahan) ಡೇಟಾಬೇಸ್‌ನೊಂದಿಗೆ ಒಪ್ಪಿಗೆ ಆಧಾರಿತ ಏಕೀಕರಣವನ್ನು ಹೊಂದಿದೆ. ಇದು ಪ್ರಯಾಣಿಕರ ವಿಳಾಸ, ವಾಹನ ಸಂಖ್ಯೆ ಮತ್ತು ಲಿಂಕ್ ಮಾಡಲಾದ ಫಾಸ್ಟ್‌ಟ್ಯಾಗ್ (FASTag) ವಿವರಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುತ್ತದೆ. ಇದಲ್ಲದೆ, ಸ್ಥಳೀಯ ಪಾಸ್‌ಗೆ ಅರ್ಹತೆಯನ್ನು ಜಿಐಎಸ್ (GIS) ಆಧಾರಿತ ಭೌಗೋಳಿಕ ಮೌಲ್ಯಮಾಪನದ ಮೂಲಕ ಪರಿಶೀಲಿಸಲಾಗುತ್ತದೆ. ಇದರಿಂದ ಸಂಪೂರ್ಣ ಪ್ರಕ್ರಿಯೆಯು ಕೆಲವೇ ನಿಮಿಷಗಳಲ್ಲಿ ಪಾರದರ್ಶಕವಾಗಿ ಪೂರ್ಣಗೊಳ್ಳುತ್ತದೆ.

22 ಭಾಷೆಗಳಲ್ಲಿ ಕಾರ್ಯನಿರ್ವಹಿಸುವ ಎಐ ಸಹಾಯವಾಣಿ 'ಮಾರ್ಗ್‌ಮಿತ್ರ'

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಲು NHAI 'ಮಾರ್ಗ್‌ಮಿತ್ರ' ಸಹಾಯ ಕೇಂದ್ರವನ್ನು ಪರಿಚಯಿಸಿದೆ. ಇದು ರಾಜಮಾರ್ಗಯಾತ್ರೆ ಆ್ಯಪ್‌ನಲ್ಲಿ ಸಂಯೋಜಿಸಲ್ಪಟ್ಟ ಬುದ್ಧಿವಂತ ಡಿಜಿಟಲ್ ಸಹಾಯ ವೇದಿಕೆಯಾಗಿದೆ. ಬಳಕೆದಾರರು ತಮ್ಮ ಪ್ರಶ್ನೆಗಳು, ರಸ್ತೆ ಸಮಸ್ಯೆಗಳು ಅಥವಾ ಕುಂದುಕೊರತೆಗಳನ್ನು ಕನ್ನಡ ಸೇರಿದಂತೆ 22 ಅಧಿಕೃತ ಭಾರತೀಯ ಭಾಷೆಗಳಲ್ಲಿ ಯಾವುದಾದರೂ ಒಂದರಲ್ಲಿ ಟೈಪ್ ಮಾಡಬಹುದು ಅಥವಾ ಮಾತನಾಡಬಹುದು. ಈ ಎಐ (AI) ಆಧರಿತ ವೇದಿಕೆಯು ತಕ್ಷಣವೇ ಅವರಿಗೆ ಸೂಕ್ತ ಮಾಹಿತಿ ಒದಗಿಸುತ್ತದೆ. ಇದರ ಮೂಲಕ ಫಾಸ್ಟ್‌ಟ್ಯಾಗ್ ರೀಚಾರ್ಜ್, ಕೆವೈಸಿ (KYC) ಅಗತ್ಯತೆಗಳು, ಮರುಪಾವತಿ ಸ್ಥಿತಿ, ವಾರ್ಷಿಕ ಮತ್ತು ಸ್ಥಳೀಯ ಪಾಸ್ ಸೇವೆಗಳಿಗೆ ತ್ವರಿತ ನೆರವು ಸಿಗಲಿದೆ.

ನೈಜ ಸಮಯದಲ್ಲಿ ದೂರುಗಳ ಉಸ್ತುವಾರಿ

ಹಸ್ತಕ್ಷೇಪದ ಅಗತ್ಯವಿರುವ ಗಂಭೀರ ಸಮಸ್ಯೆಗಳಿದ್ದಲ್ಲಿ, ಬಳಕೆದಾರರು ನೇರವಾಗಿ ದೂರು ಸಲ್ಲಿಸಬಹುದು. ಈ ದೂರುಗಳು ಸ್ವಯಂಚಾಲಿತವಾಗಿ ಸಂಬಂಧಿತ ಇಲಾಖೆಗೆ ರವಾನೆಯಾಗುತ್ತವೆ. ಪ್ರಯಾಣಿಕರು ತಮ್ಮ ದೂರುಗಳ ಪ್ರಗತಿಯನ್ನು ನೈಜ ಸಮಯದಲ್ಲಿ (Real-time tracking) ಮೇಲ್ವಿಚಾರಣೆ ಮಾಡಬಹುದು ಮತ್ತು ಪರಿಹಾರದಿಂದ ತೃಪ್ತರಾಗದಿದ್ದರೆ ಮೇಲ್ಮನವಿ ಸಲ್ಲಿಸುವ ಆಯ್ಕೆಯೂ ಇದೆ. ಫಾಸ್ಟ್‌ಟ್ಯಾಗ್ ಕಪ್ಪುಪಟ್ಟಿ (Blacklist) ಸ್ಥಿತಿಯನ್ನು ಪರಿಶೀಲಿಸಲು, ಬಾಕಿ ಇರುವ ಇ-ನೋಟಿಸ್‌ಗಳನ್ನು ವೀಕ್ಷಿಸಲು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಥಗಿತಗೊಂಡ ವಾಹನಗಳು ಅಥವಾ ಅತಿಕ್ರಮಣಗಳಂತಹ ರಸ್ತೆ ಸುರಕ್ಷತಾ ಕಾಳಜಿಗಳನ್ನು ವರದಿ ಮಾಡಲು ಸಹ ಇದು ನೆರವಾಗುತ್ತದೆ.

ಈಗಾಗಲೇ ರಾಜಮಾರ್ಗಯಾತ್ರೆ ಆ್ಯಪ್ ಮೂಲಕ ದೇಶಾದ್ಯಂತ 80 ಲಕ್ಷಕ್ಕೂ ಹೆಚ್ಚು ವಾರ್ಷಿಕ ಪಾಸ್‌ಗಳನ್ನು ಯಶಸ್ವಿಯಾಗಿ ಮಾರಾಟ ಮಾಡಲಾಗಿದ್ದು, ಇದೀಗ ಸ್ಥಳೀಯ ಪಾಸ್‌ಗಳಿಗೂ ಚಾಲನೆ ನೀಡಲಾಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ (iOS) ಬಳಕೆದಾರರು ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ಸೇವೆಗಳ ಲಾಭ ಪಡೆಯುವಂತೆ NHAI ಪ್ರೋತ್ಸಾಹಿಸಿದೆ.