ಚೆನ್ನೈ(ಡಿ.16): ಯಾವುದೇ ವಿವಾಹ ಸಮಾರಂಭದಲ್ಲಿ ವಧು- ವರನ ಜತೆಗೆ ಭೂರಿ ಭೋಜನವೂ ಆಕರ್ಷಣೆಯ ಕೇಂದ್ರ ಬಿಂದು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಇತ್ತೀಚೆಗೆ ಮದುವೆಯೂ ಆನ್‌ಲೈನ್‌ ಆಗಿರುವುದರಿಂದ ಅಂತಹ ಸಮಾರಂಭಗಳಲ್ಲಿ ಭಾಗವಹಿಸುವವರು ‘ಮದುವೆ ಊಟ’ದಿಂದಲೇ ವಂಚಿತರಾಗುತ್ತಿದ್ದಾರೆ. ಇದಕ್ಕೆ ಈಗ ಚೆನ್ನೈ ಮೂಲದ ಕಂಪನಿಯೊಂದು ಪರಿಹಾರ ಹುಡುಕಿದೆ. ಆನ್‌ಲೈನ್‌ ಮೂಲಕ ಮದುವೆ ಸಮಾರಂಭಗಳಲ್ಲಿ ಭಾಗಿಯಾದವರಿಗೆ ಮಧ್ಯಾಹ್ನ 1ರೊಳಗೆ ರುಚಿರುಚಿಯಾದ, ಬಿಸಿಬಿಸಿ ಊಟವನ್ನು ಅವರ ಮನೆಗೆ ತಲುಪಿಸುವ ಈ ಸೇವೆ ಇಂಟರ್ನೆಟ್‌ನಲ್ಲಿ ಭಾರಿ ವೈರಲ್‌ ಆಗಿದೆ.

ಚೆನ್ನೈನಲ್ಲಿರುವ ಅರಸುವೈ ಅರಸು ಎಂಬ ಕ್ಯಾಟರಿಂಗ್‌ ಕಂಪನಿ ಡಿ.10ರಂದು ಈ ಸೇವೆಯನ್ನು ಚೆನ್ನೈನಲ್ಲಿ ನೀಡಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಆನ್‌ಲೈನ್‌ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ 125 ಅತಿಥಿಗಳಿಗೆ ಮನೆಗಳಿಗೆ ಈ ಕಂಪನಿ ಮದುವೆ ಊಟ ತಲುಪಿಸಿದೆ.

ಬಾಳೆ ಎಲೆ ಹಾಗೂ 36 ರುಚಿರುಚಿಯಾದ ಆಹಾರ-ತಿನಿಸುಗಳನ್ನು ಅತಿಥಿಗಳ ಮನೆಗೆ ಮುಟ್ಟಿಸಿದೆ. ಈ ಊಟವನ್ನು ಬಾಳೆ ಎಲೆಯ ಯಾವ ಜಾಗದಲ್ಲಿ ಬಡಿಸಿಕೊಳ್ಳಬೇಕು, ಯಾವ ಡಬ್ಬಿಯಲ್ಲಿ ಯಾವ ಆಹಾರವಿದೆ ಎಂಬುದನ್ನು ವಿವರಿಸಲು ಕರಪತ್ರವನ್ನೂ ಮುದ್ರಿಸಿದೆ. ಊಟ ಬಡಿಸಿಕೊಳ್ಳಲು ಮರದ ಸ್ಪೂನುಗಳನ್ನು ಕೂಡ ನೀಡಿದೆ. ಕುಡಿಯುವ ನೀರು, ನ್ಯಾಪ್‌ಕಿನ್‌, ಪೇಪರ್‌ ಕಪ್‌ ಅನ್ನು ಈ ಮದುವೆ ಊಟ ಒಳಗೊಂಡಿದೆ. ಜತೆಗೆ ತಾಂಬೂಲವನ್ನೂ ಮದುವೆ ಊಟದ ಜತೆಗೆ ಒದಗಿಸಲಾಗಿದೆ.