ನವದೆಹಲಿ(ಅ.17): ಭಾರತೀಯ ರೈಲ್ವೆ ಸುಮಾರು 600 ಎಕ್ಸ್‌ಪ್ರೆಸ್‌/ಮೇಲ್‌ ರೈಲುಗಳನ್ನು ರದ್ದುಗೊಳಿಸುವ ಹಾಗೂ 10,200 ಹಾಲ್ಟ್‌ ರೈಲು ನಿಲ್ದಾಣಗಳನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಈ ಕುರಿತು ಅದು ಶೀಘ್ರವೇ ವೇಳಾಪಟ್ಟಿಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಈಗಿನ ಯೋಜನೆ ಪ್ರಕಾರ 360 ಪ್ಯಾಸೆಂಜರ್‌ ರೈಲುಗಳನ್ನು ಎಕ್ಸ್‌ಪ್ರೆಸ್‌ ರೈಲುಗಳನ್ನಾಗಿ ಹಾಗೂ 120 ಎಕ್ಸ್‌ಪ್ರೆಸ್‌ ರೈಲುಗಳನ್ನು ಸೂಪರ್‌ಫಾಸ್ಟ್‌ ದರ್ಜೆಗೆ ಏರಿಸುವ ಉದ್ದೇಶವಿದೆ. ಇದಕ್ಕೆ ಶೀಘ್ರವೇ ರೈಲ್ವೆ ಸಚಿವಾಲಯ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ.

ಇದೇ ವೇಳೆ ಲಿಂಕ್‌ ಸೇವೆ (ಉದಾ: ದಿಲ್ಲಿಗೆ ಹೋಗುವ ವಾಸ್ಕೋ-ನಿಜಾಮುದ್ದೀನ್‌ ರೈಲಿಗೆ ಲೋಂಡಾದಲ್ಲಿ ಹುಬ್ಬಳ್ಳಿಯಿಂದ ಬರುವ 5-6 ಬೋಗಿಗಳನ್ನು ಸೇರಿಸುವುದು) ರದ್ದುಗೊಳಿಸಿ ಪ್ರತ್ಯೇಕ ರೈಲುಗಳನ್ನು ಓಡಿಸುವ ಸಾಧ್ಯತೆ ಇದೆ.

ಇನ್ನು ರಾತ್ರೋರಾತ್ರಿ ಕೆಲವು ರೈಲುಗಳು ನಿಗದಿತ ಸ್ಥಳ ತಲುಪುವುದು ಪ್ರಯಾಣಿಕರಿಗೆ ತೊಂದರೆ ಮಾಡುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಅನುಕೂಲಕರ ವೇಳಾಪಟ್ಟಿಸಿದ್ಧಪಡಿಸುವ ಕೆಲಸದಲ್ಲಿ ರೈಲ್ವೆ ನಿರತವಾಗಿದೆ.

ಈ ಹೊಸ ನಡೆಯು ಆರ್ಥಿಕವಾಗಿ ನಷ್ಟದಲ್ಲಿರುವ ರೈಲ್ವೆಯನ್ನು ಬಲಗೊಳಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದು ಯಾವಾಗ ಜಾರಿಗೆ ಬರುತ್ತದೆ ಎಂದು ಹೇಳಲಾಗದು. ಏಕೆಂದರೆ ಕೊರೋನಾ ಕಾರಣ ಪೂರ್ಣ ಪ್ರಮಾಣದ ರೈಲು ಕಾರ್ಯಾಚರಣೆ ಆರಂಭವಾಗಿಲ್ಲ. ರೈಲುಗಳು ಪೂರ್ತಿ ಸಂಚಾರ ಆರಂಭಿಸಿದ ಬಳಿಕ ಇದು ಜಾರಿಗೊಳ್ಳಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್‌ ತಿಳಿಸಿದ್ದಾರೆ.