ನವದೆಹಲಿ(ಏ.18): ಕೊರೋನಾದಿಂದಾಗಿ ದಿನಸಿ, ಆನ್ಲೈನ್‌ ಖರೀದಿ, ನಗದು ವ್ಯವಹಾರ ದುಸ್ತರವಾಗಿ ಬಿಟ್ಟಿದೆ. ಅವುಗಳಿಂದ ಕೊರೋನಾ ಹರಡುವ ಸಾಧ್ಯತೆ ಇರುವುದರಿಂದ ಜನ ಭಯ ಭೀತರಾಗಿದ್ದಾರೆ. ಕೊಂಡು ತಂದ ವಸ್ತುಗಳ ಮೇಲೆ ಸ್ಯಾನಿಟೈಸರ್‌ ಸಿಂಪಡಿಸಿ ಉಪಯೋಗಿಸಲಾಗುತ್ತಿದೆ.

ಆದರೆ ಇದಕ್ಕೊಂದು ಪರಿಹಾರವನ್ನು ಬಿ.ಟೆಕ್‌ ವಿದ್ಯಾರ್ಥಿಯೊಬ್ಬ ಕಂಡು ಹಿಡಿದಿದ್ದಾನೆ. ವಸ್ತುಗಳ ಮೇಲಿನ ಸೋಂಕು ನಿವಾರಣೆ ಮಾಡುವ ಸಾಧನವನ್ನು ಆವಿಷ್ಕಾರ ಮಾಡಿದ್ದಾನೆ. ಪಂಜಾಬ್‌ನ ಎಲ್‌ಪಿಯೂ ಕಾಲೇಜಿನಲ್ಲಿ ಬಿ.ಟೆಕ್‌ ವಿದ್ಯಾರ್ಥಿಯಾಗಿರುವ ಅನಂತ್‌ ಕುಮಾರ್‌ ರಜಪುತ್‌ ಎಂಬಾತನೇ ಹೊಸ ಸಾಧನ ಕಂಡುಹಿಡಿದವ.

ಮೆಟೆಲ್‌ ಡಿಟೆಕ್ಟರ್‌ ಮಾದರಿಯ ಸಾಧನ ಇದಾಗಿದ್ದು, ಇದರಿಂದ ಹೊರ ಸೂಸುವ ಅಲ್ಟಾ್ರವೈಲೆಟ್‌ ಕಿರಣಗಳು ವಸ್ತುವಿನ ಮೇಲಿರುವ ಸೋಂಕನ್ನು ನಿವಾರಿಸುತ್ತದೆ. ಯಾವುದೇ ಒಂದು ವಸ್ತುವಿನ ಮೇಲೆ ಈ ಸಾಧನವನ್ನು ಆಡಿಸಿದರೆ ಸೋಂಕು ನಿವಾರಣೆಯಾಗುತ್ತದೆ. ಒಂದು ನಿಮಿಷದ ಬಳಿಕ ಬೀಪ್‌ ಸದ್ದು ಮಾಡಿ, ಸೋಂಕು ನಿವಾರಣೆಯಾಗಿರುವ ಬಗ್ಗೆ ಮಾಹಿತಿ ನೀಡುತ್ತದೆ.

ದಿನಸಿ, ಆನ್ಲೈನ್‌ನಲ್ಲಿ ಖರೀದಿ ಮಾಡಿದ ವಸ್ತುಗಳು, ಕೀ, ಹಣ, ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ವಾಹನಗಳ ಮೇಲಿನ ವೈರಸ್‌ ತೊಲಗಿಸಲು ಇದನ್ನು ಉಪಯೋಗಿಸಬಹುದು. ಇದರ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಮಾರುಕಟ್ಟೆಬೆಲೆ 1000 ರು. ಇದೆ.