ನವದೆಹಲಿ(ಅ.24): ಸಂಸತ್ತಿನ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭವಾಗಲಿದ್ದು, 2022ರ ಅಕ್ಟೋಬರ್‌ಗೆ ಪೂರ್ಣಗೊಳ್ಳಲಿದೆ. ಹೊಸ ಸಂಸತ್‌ ಭವನದಲ್ಲಿ ಎಲ್ಲ ಸಂಸದರಿಗೂ ಪ್ರತ್ಯೇಕ ಕಚೇರಿ ಒದಗಿಸಲಾಗುತ್ತದೆ. ಕಾಗದರಹಿತ ಕಚೇರಿ ಮಾಡಲು ಡಿಜಿಟಲ್‌ ಸೌಲಭ್ಯಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಹಾಲಿ ಸಂಸತ್‌ನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಯಾವುದೇ ಅಡ್ಡಿ ಇಲ್ಲದಂತೆ ಹೊಸ ಕಟ್ಟಡದ ಕಾಮಗಾರಿಗೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ.

ಹೊಸ ಕಟ್ಟಡದ ಕಾಮಗಾರಿಯಿಂದ ಸಂಸತ್‌ ಭವನ ಮತ್ತು ಸುತ್ತಮುತ್ತಲ ಕಟ್ಟಡಗಳಿಗೆ ಯಾವುದೇ ವಾಯು ಮತ್ತು ಶಬ್ದಮಾಲಿನ್ಯದ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಾಮಗಾರಿ ಮೇಲೆ ಕಣ್ಗಾವಲಿಗಾಗಿ ಲೋಕಸಭಾ ಕಾರ್ಯದರ್ಶಿ, ನಗರಾಭಿವೃದ್ಧಿ ಸಚಿವಾಲಯ, ಕೇಂದ್ರ ಲೋಕೋಪಯೋಗಿ ಸಚಿವಾಲಯ, ಎನ್‌ಡಿಎಂಸಿ ಮತ್ತು ವಾಸ್ತುವಿನ್ಯಾಸಕಾರರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಕಾರ್ಯಾಲಯ ತಿಳಿಸಿದೆ.

ಹೊಸ ಸಂಸತ್‌ ಕಟ್ಟಡವನ್ನು 861 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಟಾಟಾ ಕಂಪನಿ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದೆ. ಹೊಸ ಕಟ್ಟಡವು 888 ಲೋಕಸಭಾ ಸದಸ್ಯರು ಮತ್ತು 384 ರಾಜ್ಯಸಭಾ ಸದಸ್ಯರಿಗೆ ಆಸನ ವ್ಯವಸ್ಥೆ ಒಳಗೊಂಡಿರಲಿದೆ.

ಜೊತೆಗೆ ಎಲ್ಲಾ ಸದಸ್ಯರಿಗೆ ಪ್ರತ್ಯೇಕ ಕಚೇರಿ, ಅವುಗಳಲ್ಲಿ ಅತ್ಯಾಧುನಿಕ ಡಿಜಿಟಲ್‌ ವ್ಯವಸ್ಥೆ, ಪೇಪರ್‌ ರಹಿತ ವ್ಯವಹಾರ, ಭಾರತದ ಪ್ರಜಾಪ್ರಭುತ್ವ ಇತಿಹಾಸ ತೋರಿಸುವ ವಿಶಾಲ ಕಾನ್ಸಿಟಿಟ್ಯೂಷನ್‌ ಹಾಲ್‌, ಲಾಂಜ್‌, ಲೈಬ್ರರಿ, ವಿವಿಧ ಸಮಿತಿಗೆ ಪ್ರತ್ಯೇಕ ಕೊಠಡಿ, ಭೋಜನ ಕೊಠಡಿ, ಪಾರ್ಕಿಂಗ್‌ ಏರಿಯಾವನ್ನು ಒಳಗೊಂಡಿರಲಿದೆ.