* ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ* ಗೋವಾ ಹೊಟೇಲಲ್ಲಿ ಡಾನ್ಸ್‌: ಶಾಸಕರಿಗೆ ಶಿಂಧೆ ತರಾಟೆ* ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಎಚ್ಚರಿಕೆ 

ಪಣಜಿ(ಜು.02): ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆಯವರು ಗೋವಾದಲ್ಲಿ ಡಾನ್ಸ್‌ ಮಾಡಿದ ಬಂಡಾಯ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಿಂಧೆಯನ್ನು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ ಬಳಿಕವೇ ಗೋವಾದ ಐಶಾರಾಮಿ ಹೊಟೇಲಿನಲ್ಲಿ ತಂಗಿದ್ದ ಬಂಡಾಯ ಶಾಸಕರು ಮರಾಠಿ ಹಾಡಿಗೆ ಸಂತೋಷದಿಂದ ಕುಣಿದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ಶಾಸಕರು ಡಾನ್ಸ್‌ ಮಾಡಿದ ರೀತಿ ಅಸಭ್ಯವಾಗಿದೆ ಎಂದು ಹಲವಾರು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಮುಂಜಾನೆ ಶಾಸಕರಿದ್ದ ಹೊಟೇಲಿಗೆ ಶಿಂಧೆ ತೆರಳಿದ್ದು, ನರ್ತಿಸಿದ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಶಿಂಧೆಗೆ ಅದ್ದೂರಿ ಸ್ವಾಗತ:

ಮುಖ್ಯಮಂತ್ರಿಯಾಗಿ ಮರಳಿದ ಏಕನಾಥ ಶಿಂಧೆಗೆ ಶಿವಸೇನಾ ಬಂಡಾಯ ಶಾಸಕರು ಗೋವಾದ ಹೊಟೇಲಿನಲ್ಲಿ ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಶಿಂಧೆಯವರನ್ನು ಅಪ್ಪಿ ಅಭಿನಂದಿಸಿದ್ದು, ಅವರನ್ನು ಬೆಂಬಲಿಸಿ ಘೋಷಣೆ ಕೂಗಿದ್ದಾರೆ.

ಸಿಎಂ ಶಿಂಧೆ ಸೇರಿ 16 ಶಾಸಕರ ಸದಸ್ಯತ್ವ ಅಮಾನತಿಗೆ ಸುಪ್ರೀಂಗೆ ಮೊರೆ

ಶಾಸಕತ್ವ ಅನರ್ಹತೆ ಅರ್ಜಿ ವಿಚಾರಣೆ ಎದುರಿಸುತ್ತಿರುವ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ 15 ಶಿವಸೇನೆ ಬಂಡಾಯ ಶಾಸಕರ, ವಿಧಾನಸಭಾ ಸದಸ್ಯತ್ವವನ್ನು ಅಮಾನತಿನಲ್ಲಿ ಇರಿಸಬೇಕು ಎಂದು ಸುಪ್ರೀಂ ಕೋರ್ಚ್‌ನಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಅರ್ಜಿ ಸಲ್ಲಿಸಿದೆ. ಇದನ್ನು ವಿಚಾರಣೆಗೆ ಕೋರ್ಚ್‌ ಅಂಗೀಕರಿಸಿದ್ದು, ಜುಲೈ 11ರಂದು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

‘ಅಧಿವೇಶನದಲ್ಲಿ ಶಿಂಧೆ ಬಣವೂ ವಿಪ್‌ ಜಾರಿ ಮಾಡಲಿದೆ. ಉದ್ಧವ್‌ ಬಣವೂ ವಿಪ್‌ ಜಾರಿ ಮಾಡಲಿದೆ. ಹೀಗಾಗಿ ಯಾರ ವಿಪ್‌ಗೆ ಮಾನ್ಯತೆ ಇದೆ ಎಂಬ ಗೊಂದಲ ಸೃಷ್ಟಿಯಾಗಲಿದೆ. ಹೀಗಾಗಿ ಅನರ್ಹತೆ ನೋಟಿಸ್‌ ಪಡೆದಿರುವ 16 ಶಾಸಕರ ಸದಸ್ಯತ್ವ ಅಮಾನತಿನಲ್ಲಿರಿಸಬೇಕು’ ಎಂದು ಉದ್ಧವ್‌ ಪರ ವಕೀಲ ಕಪಿಲ್‌ ಸಿಬಲ್‌ ಮನವಿ ಮಾಡಿದರು.

‘16 ಶಾಸಕರು ತಮ್ಮ ವಿರುದ್ಧದ ಅನರ್ಹತೆ ಪ್ರಶ್ನಿಸಿ ಈಗಾಗಲೇ ಅರ್ಜಿ ಸಲ್ಲಿಸಿದ್ದು, ವಿಷಯದ ಬಗ್ಗೆ ನಮಗೆ ಅರಿವಿದೆ. ಜು.11ರಂದು ಆ ಅರ್ಜಿ ಜತೆಗೆ ನಿಮ್ಮ ಅರ್ಜಿಯನ್ನೂ ವಿಚಾರಣೆ ನಡೆಸುತ್ತೇವೆ’ ಎಂದು ನ್ಯಾ| ಸೂರ್ಯಕಾಂತ್‌ ಅವರ ಪೀಠ ಹೇಳಿತು.