ಸೋಷಿಯಲ್ ಮೀಡಿಯಾಗಳಿಗೆ ಹೊಸ ನಿಯಮ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ದೂರಿತ್ತ 72 ತಾಸಲ್ಲಿ ಜಾಲತಾಣಗಳು ನಿರ್ದಿಷ್ಟ ಪೋಸ್ಟ್ ಅಳಿಸಬೇಕು, ಹೊಸ ಐಟಿ ನಿಯಮದಿಂದ ಜಾಲತಾಣಗಳಿಗೆ ಹೊಣೆಗಾರಿಕೆ, ಅಕ್ರಮ/ತಪ್ಪು ಮಾಹಿತಿ ಪ್ರಸರಣಕ್ಕೆ ಕಡಿವಾಣದ ಜವಾಬ್ದಾರಿ: ಆರ್‌ಸಿ
ನವದೆಹಲಿ(ಅ.30): ‘ಭಾರತದಲ್ಲಿ ಕಾರ್ಯ ನಿರ್ವಹಿಸುವ ಅಮೆರಿಕ ಅಥವಾ ಯುರೋಪ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವಂತಹ ಸಾಮಾಜಿಕ ಜಾಲತಾಣಗಳ ಸಮುದಾಯ ಮಾರ್ಗಸೂಚಿಗಳು ಭಾರತೀಯರಿಗೆ ಸಂವಿಧಾನದತ್ತವಾಗಿ ಲಭ್ಯವಿರುವ ಹಕ್ಕುಗಳಿಗೆ ತದ್ವಿರುದ್ಧವಾಗಿರಬಾರದು’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಕ್ಕೆ ಮಾಡಿರುವ ಬದಲಾವಣೆಗಳು ಅಕ್ರಮ ಮಾಹಿತಿ ಅಥವಾ ತಪ್ಪು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗದಂತೆ ನೋಡಿಕೊಳ್ಳಲು ಕಂಪನಿಗಳ ಮೇಲೆ ಹೆಚ್ಚಿನ ಹೊಣೆಗಾರಿಕೆಯನ್ನು ನಿಗದಿಪಡಿಸುತ್ತದೆ. ಗಲಭೆ ಸೃಷ್ಟಿಸುವ ಉದ್ದೇಶದೊಂದಿಗೆ ಧರ್ಮ ಅಥವಾ ಜಾತಿಯ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವಂತಹ ತಪ್ಪು ಮಾಹಿತಿ ಅಥವಾ ಅಕ್ರಮ ವಿವರ ಕುರಿತು ದೂರು ಬಂದರೆ ಅದನ್ನು 72 ಗಂಟೆಗಳಲ್ಲಿ ತೆಗೆಯುವ ಹೊಣೆಗಾರಿಕೆ ಸಾಮಾಜಿಕ ಜಾಲತಾಣಗಳ ಮೇಲೆ ಇರುತ್ತದೆ. 72 ತಾಸು ಸುದೀರ್ಘ ಸಮಯವಾಯಿತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅದರ ಬದಲು 24 ತಾಸು ಆಗಬೇಕು’ ಎಂದು ಹೇಳಿದ್ದಾರೆ.
iPhone 14 Pro ಸ್ಟಾಕ್ ಖಾಲಿ, ಆಪಲ್ ಜೊತೆ ಮಾತನಾಡಿದ ಕೇಂದ್ರ ಸಚಿವ!
ಟ್ವೀಟರ್ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ತಮ್ಮ ಬಳಕೆದಾರರ ದೂರುಗಳನ್ನು ಆಲಿಸಲು ಮೇಲ್ಮನವಿ ಆಯೋಗಗಳನ್ನು ಸ್ಥಾಪಿಸಬೇಕು ಎಂಬ ಮಾಹಿತಿ ತಂತ್ರಜ್ಞಾನ ನಿಯಮಗಳ ಅಧಿಸೂಚನೆ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಬಳಕೆದಾರರಿಂದ ದೂರುಗಳು ಬಂದರೂ ಸಾಮಾಜಿಕ ಜಾಲತಾಣಗಳು ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇಂತಹ ಲಕ್ಷಾಂತರ ಸಂದೇಶಗಳನ್ನು ನಾಗರಿಕರು ಕಳುಹಿಸಿದ್ದರು. ಸಾಮಾಜಿಕ ಜಾಲತಾಣಗಳ ಇಂತಹ ಧೋರಣೆಯನ್ನು ಒಪ್ಪಲಾಗದು ಎಂದು ಹೇಳಿದರು.