ಫಾಸ್ಟ್‌ಟ್ಯಾಗ್ ಬಳಕೆಗೆ ಹೊಸ ನಿಯಮ ಜಾರಿಯಾಗಿದೆ. ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, ೬೦ ನಿಮಿಷದೊಳಗೆ ರೀಚಾರ್ಜ್ ಮಾಡದಿದ್ದರೆ ದಂಡ. ಕೆವೈಸಿ ಪೂರ್ಣಗೊಳಿಸದ ಫಾಸ್ಟ್‌ಟ್ಯಾಗ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಿ ದಂಡ ವಿಧಿಸಲಾಗುವುದು. ಪ್ರಯಾಣಕ್ಕೂ ಮುನ್ನ ಫಾಸ್ಟ್‌ಟ್ಯಾಗ್ ಸಕ್ರಿಯವಿದೆಯೇ, ಬ್ಯಾಲೆನ್ಸ್ ಸಾಕಷ್ಟಿದೆಯೇ ಎಂದು ಖಚಿತಪಡಿಸಿಕೊಳ್ಳಿ. ದೂರುಗಳನ್ನು ೧೫ ದಿನಗಳ ನಂತರ ಸಲ್ಲಿಸಬಹುದು.

ನವದೆಹಲಿ: ವಂಚನೆ, ವಿವಾದಕ್ಕೆ ಬ್ರೇಕ್‌ ಹಾಕುವ ಮತ್ತು ಟೋಲ್‌ ಪಾವತಿಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ನ್ಯಾಷನಲ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ಮತ್ತು ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿ ಹೊಸ ನಿಯಮವನ್ನು ಜಾರಿಗೊಳಿಸಿದೆ.

ಕಡಿಮೆ ಬ್ಯಾಲೆನ್ಸ್‌, ವಿಳಂಬ ಪಾವತಿ ಅಥವಾ ಕಪ್ಟುಪಟ್ಟಿಗೆ ಸೇರ್ಪಡೆಯಾದ ಫಾಸ್ಟ್‌ಟ್ಯಾಗ್‌ಗಳಿಗೆ ದಂಡ ವಿಧಿಸುವ ಈ ಹೊಸ ನಿಯಮ ಫೆ.17ರ ಸೋಮವಾರದಿಂದಲೇ ಜಾರಿಗೆ ಬರಲಿದೆ. ಹೀಗಾಗಿ ಪ್ರಯಾಣಿಕರು ಪ್ರಯಾಣಕ್ಕೆ ಮೊದಲೇ ತಮ್ಮ ಫಾಸ್ಟ್‌ಟ್ಯಾಗ್‌ ಸಕ್ರಿಯವಾಗಿದೆಯೇ, ಸೂಕ್ತ ಬ್ಯಾಲೆನ್ಸ್‌ ಇದೆಯೇ ಎಂದು ಖಚಿತಪಡಿಸಿಕೊಳ್ಳುವುದು ಒಳಿತು.

ಏನೇನು ನಿಯಮ?

1. ಫಾಸ್ಟ್‌ಟ್ಯಾಗ್‌ನಲ್ಲಿ ಸದಾ ಸಮಯ ಸೂಕ್ತ ಮೊತ್ತ ಖಚಿತಪಡಿಸಬೇಕು. ಒಂದು ವೇಳೆ ಖಾತೆಯಲ್ಲಿ ಅಗತ್ಯ ಹಣ ಇಲ್ಲದೇ ಹೋದಲ್ಲಿ ಟೋಲ್‌ಗೇಟ್‌ನಲ್ಲಿ ಪ್ರವೇಶ ನೀಡಲಾಗುವುದು. ಆದರೆ ತಕ್ಷಣವೇ ನಿಮ್ಮ ಖಾತೆಯಲ್ಲಿ ಅಗತ್ಯ ಹಣ ಇಲ್ಲ. ಅದನ್ನು ಮುಂದಿನ 60 ನಿಮಿಷದಲ್ಲಿ ಭರ್ತಿ ಮಾಡಿ ಎಂದು ಮೊಬೈಲ್‌ಗೆ ಸಂದೇಶ ರವಾನೆಯಾಗಲಿದೆ. ಈ ಅವಧಿಯಲ್ಲಿ ಅಗತ್ಯ ಹಣ ಹಾಕಿಕೊಳ್ಳದೇ ಹೋದಲ್ಲಿ ಟೋಲ್‌ಗೇಟ್‌ನಿಂದ ಎಕ್ಸಿಟ್‌ ಆಗುವ ವೇಳೆ ಟೋಲ್‌ ಶುಲ್ಕದ ಎರಡು ಪಟ್ಟ ಹಣ ಕಡಿತ ಮಾಡಲಾಗುವುದು.

2. ವಾಹನ ಟೋಲ್‌ ದಾಟುವ 60 ನಿಮಿಷ ಮೊದಲು ಮತ್ತು ಟೋಲ್‌ ದಾಟಿದ ಕನಿಷ್ಠ 10 ನಿಮಿಷ ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಇಲ್ಲದೇ ಹೋದಲ್ಲಿ ಅಂಥ ಫಾಸ್ಟ್‌ಟ್ಯಾಗ್‌ನಿಂದ ವಹಿವಾಟು ನಿರಾಕರಿಸಲಾಗುವುದು. ಇಂಥ ವೇಳೆ ಟೋಲ್‌ ಸಿಸ್ಟಮ್‌ನಲ್ಲಿ ಎರರ್‌ ಕೋಡ್‌ 176 ಎಂದು ತೋರಿಸಲಾಗುವುದು. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ದಂಡ ಕಟ್ಟಬೇಕು.

3. ಕೆವೈಸಿ ನಿಯಮ ಪಾಲಿಸದ ಫಾಸ್ಟ್‌ಟ್ಯಾಗ್ ಖಾತೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ಇಂಥ ಫಾಸ್ಟ್‌ಟ್ಯಾಗ್‌ನೊಂದಿಗೆ ಟೋಲ್ ಪ್ರವೇಶಿಸಿದರೆ ಅವುಗಳ ಮೂಲಕ ವಹಿವಾಟು ನಿರಾಕರಿಸಲಾಗುವುದು. ಹೀಗೆ ವಹಿವಾಟು ನಿರಾಕರಣೆಯಾದರೆ ವಾಹನ ಮಾಲೀಕರಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುವುದು.

4. ಒಂದು ವೇಳೆ ವಾಹನ ಟೋಲ್‌ಗೇಟ್‌ ದಾಟಿದ 15 ನಿಮಿಷ ಬಳಿಕ ಅವರ ಫಾಸ್ಟ್‌ಟ್ಯಾಗ್‌ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರಿಗೆ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ.

5. ಟೋಲ್‌ನಲ್ಲೇ ಹಣ ಕಡಿತ ವಿಳಂಬವಾದರೆ ಮತ್ತು ಬಳಕೆದಾರರ ಫಾಸ್ಟ್‌ಟ್ಯಾಗ್‌ ಖಾತೆಯಲ್ಲಿ ಆ ಹಂತದಲ್ಲಿ ಸೂಕ್ತ ಹಣ ಇಲ್ಲದಿದ್ದರೆ ಅದಕ್ಕೆ ಟೋಲ್‌ ಆಪರೇಟರ್‌ ಅನ್ನೇ ಹೊಣೆ ಮಾಡಲಾಗುತ್ತದೆ. ತಪ್ಪು ಶುಲ್ಕ ಅಥವಾ ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದಾಗಿದೆ.

ಬಳಕೆದಾರರು ಏನು ಮಾಡಬೇಕು?: ಈ ಹಿಂದೆ ಟೋಲ್ ಬೂತ್‌ನಲ್ಲೇ ಬಳಕೆದಾರರು ಫಾಸ್ಟ್‌ಟ್ಯಾಗ್ ರೀಚಾರ್ಚ್‌ ಮಾಡಿಕೊಂಡು ಪ್ರಯಾಣ ಮಾಡಬಹುದಿತ್ತು. ಹೊಸ ನಿಯಮದಿಂದ ಅದಕ್ಕೆ ಅಡ್ಡಿಯಾಗಲಿದೆ. ಹೀಗಾಗಿ ಹೆಚ್ಚುವರಿ ಶುಲ್ಕ ಅಥವಾ ದಂಡದಿಂದ ತಪ್ಪಿಸಕೊಳ್ಳಬೇಕಿದ್ದರೆ ಪ್ರಯಾಣಕ್ಕೆ ಮೊದಲೇ ಫಾಸ್ಟ್‌ಟ್ಯಾಗ್‌ ಅನ್ನು ಸಕ್ರಿಯಗೊಳಿಸಬೇಕು. ಕೆವೈಸಿ ಪೂರ್ಣಗೊಳಿಸದ ಕಾರಣ ಕಪ್ಪುಪಟ್ಟಿಯಲ್ಲಿದೆಯೇ ಹಾಗೂ ಫಾಸ್ಟ್‌ಟ್ಯಾಗ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್‌ ಇದೆಯೇ ಎಂದೂ ಪರಿಶೀಲಿಸಿಕೊಳ್ಳಬೇಕು.