ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಹೊಸ ದಿಕ್ಕು: ಕೇಂದ್ರ ಗೃಹ ಸಚಿವ ಅಮಿತ್ ಶಾ
ಮೂರೂ ಮಸೂದೆಗಳನ್ನು ಸಮಗ್ರ ಸಮಾಲೋಚನೆ ಬಳಿಕ ರೂಪಿಸಲಾಗಿದೆ. ಮಸೂದೆ ಬಗ್ಗೆ 158 ಸಭೆ ನಡೆಸಿದ್ದೇನೆ. ಕರಡು ಮಸೂದೆಯಲ್ಲಿನ ಪ್ರತಿ ಅರ್ಧವಿರಾಮ ಮತ್ತು ಪೂರ್ಣ ವಿರಾಮಗಳನ್ನು ಕೂಡಾ ನಾನು ಗಮನಿಸಿದ ಬಳಿಕವೇ ಅದನ್ನು ಸದನದಲ್ಲಿ ಮಂಡಿಸಲಾಗಿದೆ: ಅಮಿತ್ ಶಾ
ನವದೆಹಲಿ(ಡಿ.21): ವಸಾಹತುಶಾಹಿ ಕಾಲದ ಕಾನೂನುಗಳ ಬದಲಾವಣೆಗಾಗಿ ತಂದಿರುವ ನೂತನ ಕ್ರಿಮಿನಲ್ ಕಾಯ್ದೆಗಳು, ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯ ಉದ್ದೇಶ ಹೊಂದಿರುವ ಜೊತೆಗೆ ಮಾನವ ಕೇಂದ್ರಿತವಾಗಿವೆ ಹಾಗೂ ದಂಡದ ಬದಲಾಗಿ ನ್ಯಾಯದಾನದ ಉದ್ದೇಶ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಂಡಿಸಲಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಭಾರತೀಯ ಸಾಕ್ಷ್ಯ ಸಂಹಿತೆ ಕುರಿತು ಮಾತನಾಡಿದ ಅಮಿತ್ ಶಾ, ‘ಮೂರೂ ಮಸೂದೆಗಳನ್ನು ಸಮಗ್ರ ಸಮಾಲೋಚನೆ ಬಳಿಕ ರೂಪಿಸಲಾಗಿದೆ. ಮಸೂದೆ ಬಗ್ಗೆ 158 ಸಭೆ ನಡೆಸಿದ್ದೇನೆ. ಕರಡು ಮಸೂದೆಯಲ್ಲಿನ ಪ್ರತಿ ಅರ್ಧವಿರಾಮ ಮತ್ತು ಪೂರ್ಣ ವಿರಾಮಗಳನ್ನು ಕೂಡಾ ನಾನು ಗಮನಿಸಿದ ಬಳಿಕವೇ ಅದನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ಹೇಳಿದರು.
ಗುಂಪು ಹತ್ಯೆಗೆ ಗಲ್ಲು ಶಿಕ್ಷೆ, ಮಹತ್ತರ ಬದಲಾವಣೆಯ ಭಾರತೀಯ ನ್ಯಾಯ ಸಂಹಿತೆ ಬಿಲ್ ಪಾಸ್!
ಹಾಲಿ ಜಾರಿಯಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ), ಭಾರತೀಯ ಸಾಕ್ಷ್ಯ ಕಾಯ್ದೆ ಮತ್ತು ಅಪರಾಧ ಪ್ರಕ್ರಿಯಾ (ಸಿಆರ್‌ಪಿಸಿ) ಕಾಯ್ದೆಗಳು ನ್ಯಾಯದಾನದ ಬದಲಾಗಿ ದಂಡ ವಿಧಿಸುವ ವಸಾಹತುಶಾಹಿ ಮನಸ್ಥಿತಿಯನ್ನು ಪ್ರತಿನಿಧಿಸುತ್ತವೆ. . ಹೀಗಾಗಿ ಅವುಗಳನ್ನು ತೆಗೆದು ಹಾಕಿ, ಭಾರತೀಯ ಚಿಂತನೆಗಳನ್ನು ಒಳಗೊಂಡ ಕಾಯ್ದೆ ರೂಪಿಸಲಾಗಿದೆ. ಇವು ಜನರನ್ನು ವಸಾಹತುಶಾಹಿ ಮನಸ್ಥಿತಿ ಮತ್ತು ಅದರ ಚಿಹ್ನೆಗಳಿಂದ ಮುಕ್ತ ಮಾಡಲಿದ’ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಮೊದಲ ಬಾರಿಗೆ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಮಾನವ ಕೇಂದ್ರಿತ ಸ್ಪರ್ಶವನ್ನು ಹೊಂದಿದೆ. ಈ ಕಾಯ್ದೆಯನ್ನು ನ್ಯಾಯದಾನ, ಪಾರದರ್ಶಕತೆ ಮತ್ತು ನ್ಯಾಯಸಮ್ಮತೆಯ ಆಧಾರವಾಗಿ ರೂಪಿಸಲಾಗಿದೆ ಎಂದು ಹೇಳಿದರು.