ನವದೆಹಲಿ(ಫೆ.24): ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೋನಾ ವೈರಸ್‌ನ ಎನ್‌440ಕೆ ಮತ್ತು ಎ484ಕೆ ಎಂಬ ಎರಡು ಪ್ರಭೇದಗಳು ಪತ್ತೆ ಆಗಿವೆ. ಇವುಗಳ ಪೈಕಿ ಒಂದು ಪ್ರಭೇದ ಕೇರಳದಲ್ಲೂ ಪತ್ತೆ ಆಗಿವೆ. ಆದರೆ, ಹೊಸ ಪ್ರಭೇದಗಳಿಂದಾಗಿಯೇ ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳ ಏರಿಕೆ ಆಗಿದೆ ಎಂಬುದಕ್ಕೆ ಯಾವುದೇ ಕಾರಣಗಳು ಇಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್‌, ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್‌ನ ಹೊಸ ಪ್ರಭೇದಗಳ ಜೊತೆ ಬ್ರಿಟನ್‌, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್‌ನ ಮಾದರಿಗಳು ಕೂಡ ದೇಶದಲ್ಲಿವೆ. ಆದರೆ, ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಕೊರೋನಾದ ಹೊಸ ಮಾದರಿಗಳಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಭಾವಿಸುವುದಕ್ಕೆ ಯಾವುದೇ ಕಾರಣಗಳು ಇಲ್ಲ.

ದೇಶದಲ್ಲಿ ಇದುವರೆಗೆ 187 ಮಂದಿಗೆ ಬ್ರಿಟನ್‌ ಸೋಂಕು, ಆರು ಮಂದಿಗೆ ದಕ್ಷಿಣ ಆಫ್ರಿಕಾ ವೈರಸ್‌ ಹಾಗೂ ಓರ್ವ ವ್ಯಕ್ತಿಯಲ್ಲಿ ಬ್ರೆಜಿಲ್‌ ಸೋಂಕು ಪತ್ತೆ ಆಗಿದೆ. ಹೊಸ ಮಾದರಿಗಳ ವರ್ತನೆಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ. ಇದುವರೆಗೆ ಕೊರೋನಾದ 3,500 ಮಾದರಿಗಳನ್ನು ಅಕ್ರಮವಾಗಿ ಹೆಸರಿಸಲಾಗಿದೆ ಎಂದು ಹೇಳಿದ್ದಾರೆ.