ನವದೆಹಲಿ(ಡಿ.23): ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ಕೊರೋನಾ ವೈರಸ್‌ನ ಹೊಸ ಪ್ರಭೇದ ಭಾರತದಲ್ಲಿ ಇನ್ನೂ ಯಾರಲ್ಲೂ ಪತ್ತೆಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಂಗಳವಾರ ತಿಳಿಸಿದೆ.

ಈ ಕುರಿತು ದೇಶದಲ್ಲಿ ಎದ್ದಿರುವ ಆತಂಕದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ

ಸಮೀರಣ ಪಾಂಡಾ, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ)ಯಲ್ಲಾಗಲೀ ಅಥವಾ ದೇಶಾದ್ಯಂತ ಇರುವ ಯಾವುದೇ ಪ್ರಯೋಗಾಲಯದಲ್ಲಾಗಲೀ ಇಲ್ಲಿಯವರೆಗೂ ಬ್ರಿಟನ್ನಿನಲ್ಲಿ ಪತ್ತೆಯಾದ ಕೊರೋನಾ ತಳಿ ಪತ್ತೆಯಾಗಿಲ್ಲ. ನಮ್ಮಲ್ಲೇ ಈವರೆಗೆ ಕೊರೋನಾದ ಕೆಲ ಹೊಸ ಪ್ರಭೇದಗಳು ಪತ್ತೆಯಾಗಿದ್ದು, ಅವ್ಯಾವುವೂ ಅಪಾಯಕಾರಿಯಲ್ಲ ಎಂದು ಹೇಳಿದ್ದಾರೆ.

ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ಹೊಸ ತಳಿ ಕೂಡ ಈಗಿರುವ ಕೊರೋನಾ ವೈರಸ್‌ಗಿಂತ ಹೆಚ್ಚು ಅಪಾಯಕಾರಿ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಈಗ ಬಿಡುಗಡೆಯಾಗಿರುವ ಲಸಿಕೆಗಳು ಈ ವೈರಸ್‌ ವಿರುದ್ಧ ಕಡಿಮೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂಬುದಕ್ಕೂ ಸಾಕ್ಷ್ಯವಿಲ್ಲ. ಬ್ರಿಟನ್ನಿನಲ್ಲಿ ಪತ್ತೆಯಾದ ತಕ್ಷಣ ಆ ತಳಿ ಭಾರತದಲ್ಲೂ ಪತ್ತೆಯಾಗಿಬಿಡುತ್ತದೆ ಎಂದು ಹೇಳಲಾಗದು. ಆ ವೈರಸ್‌ ಭಾರತಕ್ಕೆ ಪ್ರವೇಶಿಸಿದ್ದರೆ ಸರ್ವೇಕ್ಷಣೆಯಲ್ಲಿ ಸಿಕ್ಕೇ ಸಿಗುತ್ತದೆ ಎಂದೂ ತಿಳಿಸಿದ್ದಾರೆ.