ಕಠ್ಮಂಡು(ನ.28: ಕೋವಿಡ್‌ ವಿರುದ್ಧದ ಲಸಿಕೆ ಸಿದ್ಧವಾದ ಬಳಿಕ ನೇಪಾಳಕ್ಕೆ ಅಗತ್ಯ ಲಸಿಕೆಯನ್ನು ಒದಗಿಸುವುದು ನಮ್ಮ ಆದ್ಯತೆ ಎಂದು ನೇಪಾಳದ ಜನತೆಗೆ ಭಾರತ ಶುಕ್ರವಾರ ಭರವಸೆ ನೀಡಿದೆ. ತನ್ಮೂಲಕ ತನ್ನ ಜತೆ ಗಡಿ ಕ್ಯಾತೆ ತೆಗೆದ ನೇಪಾಳಕ್ಕೆ ಕೊರೋನಾ ಲಸಿಕೆ ವಿಷಯದಲ್ಲಿ ನೆರವಾಗುವ ವಾಗ್ದಾನ ನೀಡಿದೆ.

ನೇಪಾಳ ಭೇಟಿಯಲ್ಲಿರುವ ವಿದೇಶಾಂಗ ಕಾರ‍್ಯದರ್ಶಿ ಹರ್ಷವರ್ಧನ್‌ ಶ್ರಿಂಗ್ಲಾ ಅವರು ಮಾತನಾಡಿ, ‘ಭಾರತ ಕೊರೋನಾ ವೈರಸ್ಸಿಗೆ ಲಸಿಕೆ ಪಡೆಯುವ ಪ್ರಯತ್ನದ ತುತ್ತತುದಿಯಲ್ಲಿದೆ. ಕನಿಷ್ಠ 5 ಲಸಿಕೆಗಳು ಕೊನೆಯ ಹಂತದ ಪರೀಕ್ಷೆಗೆ ಒಳಪಟ್ಟಿವೆ.

ಈ ಲಸಿಕೆಗಳು ಸಿದ್ಧವಾದೊಡನೆ ನೇಪಾಳಕ್ಕೆ ಅಗತ್ಯ ಪ್ರಮಾಣದ ಲಸಿಕೆ ಒದಗಿಸುವುದು ನಮ್ಮ ಆದ್ಯತೆ’ ಎಂದು ಹೇಳಿದ್ದಾರೆ. ನೇಪಾಳದಲ್ಲಿ ಈವರೆಗೆ 2.26ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದ್ದು, 1400 ಮಂದಿ ಬಲಿಯಾಗಿದ್ದಾರೆ.

ಸ್ಪುಟ್ನಿಕ್‌ ಲಸಿಕೆಯೂ ಭಾರತದಲ್ಲಿ ಉತ್ಪಾದನೆ

ರಷ್ಯಾದ ಸ್ಪುಟ್ನಿಕ್‌-5 ಕೊರೋನಾ ಲಸಿಕೆ ಶೇ.95ರಷ್ಟುಪರಿಣಾಮಕಾರಿ ಎಂಬುದು ಸಾಬೀತಾದ ಬೆನ್ನಲ್ಲೇ, ಭಾರತದಲ್ಲಿ ಈ ಲಸಿಕೆಯ 10 ಕೋಟಿ ಡೋಸ್‌ಗಳನ್ನು ಉತ್ಪಾದಿಸಲು ಹೈದರಾಬಾದ್‌ ಮೂಲದ ಹೆಟೆರೊ ಔಷಧ ತಯಾರಿಕಾ ಕಂಪನಿಯ ಜೊತೆ ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್‌) ಒಪ್ಪಂದ ಮಾಡಿಕೊಂಡಿದೆ