ಈಶಾನ್ಯ ರಾಜ್ಯಗಳಲ್ಲಿ ಮರಳಿ ಅಧಿಕಾರ ಹಿಡಿದಿರುವ ಬಿಜೆಪಿ ಇದೀಗ ಸರ್ಕಾರ ರಚನೆ ಮಾಡಿದೆ. ನಾಗಾಲ್ಯಾಂಡ್‌ನಲ್ಲಿ ನೆಫಿಯೋ ರಿಯೋ 5ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ದಾಖಲೆ ಬರೆದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

ಕೊಹಿಮಾ(ಮಾ.07): ಈಶಾನ್ಯ ರಾಜ್ಯಗಳಲ್ಲಿ ಭರ್ಜರಿ ಗೆಲುವಿನ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ ಇದೀಗ ಒಂದೊಂದೆ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುತ್ತಿದೆ. ಇಂದು ನೆಫಿಯೋ ರಿಯೋ 5ನೇ ಬಾರಿಗೆ ನಾಗಾಲ್ಯಾಂಡ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಾಗಾಲ್ಯಾಂಡ್ ರಾಜ್ಯಪಾಲ ಲಾ ಗಣೇಶನ್ ಸಿಎಂಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ನೆಫಿಯೋ ರಿಯೋ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೆ, ಉಪಮುಖ್ಯಮಂತ್ರಿಯಾಗಿ ತಡಿಟುಯಿ ರಂಗಕೌ ಝೆಲಿಯಾಂಗ್ ಹಾೂ ಯಾಂತುಂಗೋ ಪ್ಯಾಟನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ನಾಗಾಲ್ಯಾಂಡ್‌ನಲ್ಲಿ ಇದೀಗ ಹೊಸ ಸರ್ಕಾರ ರಚನೆಯಾಗಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ತುಂಬಾ ಕೇಸರಿ ಧ್ವಜಗಳು ಹಾರಾಡುತ್ತಿದೆ.

ಕರ್ನಾಟಕ ಬಿಜೆಪಿ ಚುನಾವಣೆಗೆ ದೇಶದ ದೇವಮೂಲೆ ಫಲಿತಾಂಶ ಬೂಸ್ಟರ್ ಡೋಸ್

ನಾಗಾಲ್ಯಾಂಡ್‌ ವಿಧಾನಸಭೆಗೆ (Nagaland Assembly Election Result) ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎನ್‌ಡಿಪಿಪಿ-ಬಿಜೆಪಿ (NDPP- BJP) ಮೈತ್ರಿಕೂಟ 37 ಸ್ಥಾನ ಗೆದ್ದು ಅಧಿಕಾರ ಹಿಡಿಯುವುದು ಖಚಿತವಾಗಿದೆ. ಉಳಿದ 23 ಸ್ಥಾನ ಗೆದ್ದ ಇತರೆ ಪಕ್ಷಗಳು ಇನ್ನೂ ರಚನೆಯಾಗಬೇಕಿರುವ ಬಿಜೆಪಿ ಮೈತ್ರಿಕೂಟದ ಸರ್ಕಾರಕ್ಕೆ ಬೆಂಬಲ ಘೋಷಿಸಿವೆ. ಹೀಗಾಗಿ ಈ ಬಾರಿ ವಿಧಾನಸಭೆ ವಿಪಕ್ಷ ರಹಿತವಾಗಿರುವ ಸಾಧ್ಯತೆ ಇದೆ. ಈ ಹಿಂದೆ 2015 ಮತ್ತು 2021ರಲ್ಲೂ ಇದೇ ರೀತಿ ವಿಪಕ್ಷ ರಹಿತ ಸರ್ಕಾರ ಇತ್ತಾದರೂ, ಆಗ ಸರ್ಕಾರ ರಚನೆಯಾದ ಬಳಿಕ ಉಳಿದ ಪಕ್ಷಗಳು ಸರ್ಕಾರಕ್ಕೆ ಬೇಷರತ್‌ ಬೆಂಬಲ ಘೋಷಿಸಿದ್ದವು. ಆದರೆ ಈ ಬಾರಿ ಸರ್ಕಾರ ರಚನೆಗೂ ಮೊದಲೇ ವಿಪಕ್ಷ ರಹಿತ ಸರ್ಕಾರ ಖಚಿತಪಟ್ಟಿದೆ. ಇಲ್ಲಿ ಕಾಂಗ್ರೆಸ್‌ ಒಂದೂ ಸ್ಥಾನ ಗೆದ್ದಿಲ್ಲ.

ಚುನಾವಣೆಯಲ್ಲಿ ನೆಫಿಯೋ ರಿಯೋ ನೇತೃತ್ವದ ದ ನ್ಯಾಷನಲ್‌ ಡೆಮಾಕ್ರೆಟಿಕ್‌ ಪ್ರೋಗ್ರೇಸ್ಸಿವ್‌ ಪಾರ್ಟಿ (ಎನ್‌ಡಿಪಿಪಿ) ಮತ್ತು ಬಿಜೆಪಿ ಮೈತ್ರಿಕೂಟ 37 ಸ್ಥಾನ ಗೆದ್ದಿದೆ. ಈ ಮೂಲಕ ಸತತ 2ನೇ ಬಾರಿಗೆ ಅಧಿಕಾರಕ್ಕೆ ಏರಿದೆ. ಈ ಪೈಕಿ ಎನ್‌ಡಿಪಿಪಿ 26 ಮತ್ತು ಬಿಜೆಪಿ 12 ಸ್ಥಾನ ಗೆದ್ದುಕೊಂಡಿವೆ. ಕಳೆದ ಬಾರಿಯಂತೆ ಈ ಬಾರಿಯೂ ಎನ್‌ಡಿಪಿಪಿ ಮತ್ತು ಬಿಜೆಪಿ 40:20 ಸೂತ್ರದಡಿ ಚುನಾವಣೆಗೆ ಸ್ಪರ್ಧಿಸಿದ್ದವು. ಎನ್‌ಡಿಪಿಪಿ ಶೇ.32.22, ಬಿಜೆಪಿ ಶೇ.18.81ರಷ್ಟುಮತ ಪಡೆದುಕೊಂಡಿವೆ. ಕಾಂಗ್ರೆಸ್‌ ಕೇವಲ ಶೇ.3.55ರಷ್ಟುಮತ ಪಡೆದಿದೆ.

ಕೆಲವರು ಮರ್‌ ಜಾ ಎಂದರೆ, ಜನ ಮತ್‌ ಜಾ ಎನ್ನುತ್ತಿದ್ದಾರೆ: ಮೋದಿ

ಉಳಿದಂತೆ ಯಾವುದೇ ಪಕ್ಷಗಳು ಎರಡಂಕಿ ದಾಟುವಲ್ಲಿ ವಿಫಲವಾಗಿವೆ. ಇನ್ನು ಎನ್‌ಸಿಪಿ 7 ಎನ್‌ಪಿಪಿ 5, ಎಲ್‌ಜೆಪಿ 2, ಆರ್‌ಪಿಐ 2 , ಎನ್‌ಪಿಎಫ್‌ ತಲಾ 2 ಸ್ಥಾನ, ಜೆಡಿಯು 1 ಗೆದ್ದಿವೆ. ಪಕ್ಷೇತರರು 4 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ಒಂದೇ ಒಂದು ಸ್ಥಾನ ಗೆಲ್ಲಲೂ ಸಫಲವಾಗಿಲ್ಲ.