Asianet Suvarna News Asianet Suvarna News

ಕೋವಿಡ್‌ ಆರ್ಥಿಕ ಸಂಕಷ್ಟದಿಂದ ಶಿಶು ಸಾವು: ಭಾರತದಲ್ಲೇ ಅಧಿಕ!

* ವಿಶ್ವಬ್ಯಾಂಕ್‌ ಅಧ್ಯಯನದಲ್ಲಿ ಆಘಾತಕಾರಿ ಅಂಶ ಪತ್ತೆ

* ಕೋವಿಡ್‌ ಆರ್ಥಿಕ ಸಂಕಷ್ಟದಿಂದ ಮಕ್ಕಳ ಸಾವು: ಭಾರತದಲ್ಲೇ ಅಧಿಕ

* 2020ರಲ್ಲಿ ಭಾರತದಲ್ಲಿ ಹೆಚ್ಚುವರಿ 99642 ಮಕ್ಕಳ ಸಾವು

Nearly 1 lakh infant deaths in India due to Covid economic decline finds World Bank research pod
Author
Bangalore, First Published Aug 25, 2021, 9:13 AM IST
  • Facebook
  • Twitter
  • Whatsapp

ನವದೆಹಲಿ(ಆ.25): ಕೋವಿಡ್‌ ಸೋಂಕು ಜಾಗತಿಕ ಆರ್ಥಿಕತೆಯ ಮೇಲೆ ಬೀರಿದ ವ್ಯತಿರಿಕ್ತ ಪರಿಣಾಮಗಳಿಂದಾಗಿ 2020ರಲ್ಲಿ ಜಗತ್ತಿನಾದ್ಯಂತ 2.67 ಲಕ್ಷ ಮಕ್ಕಳು ಹೆಚ್ಚುವರಿಯಾಗಿ ಸಾವನ್ನಪ್ಪಿದ್ದಾರೆ. ಈ ಪೈಕಿ ಮೂರನೇ ಒಂದು ಪಾಲು, ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಭಾರತದ್ದೇ ಆಗಿದೆ ಎಂದು ವರದಿಯೊಂದು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.

ಆರ್ಥಿಕತೆಯ ಮೇಲೆ ಕೋವಿಡ್‌ ಪರಿಣಾಮ ಮತ್ತು ಅದರಿಂದಾದ ಮಕ್ಕಳ ಸಾವಿನ ಕುರಿತು ವಿಶ್ವಬ್ಯಾಂಕ್‌ ನೇತೃತ್ವದಲ್ಲಿ ಅಧ್ಯಯನ ನಡೆಸಲಾಗಿತ್ತು. ಅದರ ವರದಿ ಇದೀಗ ‘ಬಿಎಂಜೆ ಓಪನ್‌’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಆ ವರದಿಯನ್ವಯ 2020ರಲ್ಲಿ ವಿಶ್ವದಾದ್ಯಂತ 2,67,208 ಮಕ್ಕಳು ಹೆಚ್ಚುವರಿಯಾಗಿ ಸಾವನಪ್ಪಿದ್ದಾರೆ. ಈ ಪೈಕಿ ಅತಿ ಹೆಚ್ಚಿನ ಪ್ರಮಾಣದ ಸಾವು ದಾಖಲಾಗಿರುವುದು ದಕ್ಷಿಣ ಏಷ್ಯಾದ 8 ದೇಶಗಳಲ್ಲಿ. ಈ 8 ದೇಶಗಳಲ್ಲಿ 1,13141 ಮಕ್ಕಳು ಹೆಚ್ಚುವರಿಯಾಗಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಭಾರತದ ಪಾಲೇ 99642ರಷ್ಟಿದೆ ಎಂದು ವರದಿ ಹೇಳಿದೆ.

ಭಾರತದಲ್ಲಿ ಪ್ರತಿ ವರ್ಷ ಅಂದಾಜು 2.42 ಕೋಟಿ ಮಕ್ಕಳ ಜನನವಾಗುತ್ತದೆ. ಮತ್ತೊಂದೆಡೆ 2020ರಲ್ಲಿ ದೇಶದ ಆರ್ಥಿಕತೆ ಶೂನ್ಯಕ್ಕಿಂತ 17.3ರಷ್ಟುಕೆಳಗೆ ಕುಸಿದಿತ್ತು. ಇದು ಭಾರತದಲ್ಲೇ ಹೆಚ್ಚಿನ ಸಾವು ದಾಖಲಾಗಲು ಕಾರಣ ಎನ್ನಲಾಗಿದೆ.

ವರದಿಯಲ್ಲೇನಿದೆ?:

2020ರಲ್ಲಿ ಎಷ್ಟುಸಾವಾಗಬಹುದು ಎಂಬ ಲೆಕ್ಕಾಚಾರವಿತ್ತೋ ಅದಕ್ಕಿಂತ ಶೇ.7ರಷ್ಟು ಹೆಚ್ಚಿನ ಸಾವು ದಾಖಲಾಗಿದೆ. ಇದಕ್ಕೆ ಕಾರಣ ಜಾಗತಿಕ ಆರ್ಥಿಕತೆ ಕೋವಿಡ್‌ ಕಾಣಿಸಿಕೊಂಡ ಮೊದಲ ವರ್ಷ ಶೇ.5ರಷ್ಟುಕುಸಿತ ಕಂಡಿದ್ದು. ಈ ಅವಧಿಯಲ್ಲಿ 12 ಕೋಟಿ ಜನರು ಹೆಚ್ಚುವರಿಯಾಗಿ ಬಡತನಕ್ಕೆ ತಳ್ಳಲ್ಪಟ್ಟರು ಎಂದು ವರದಿ ಹೇಳಿದೆ.

ಸಾವಿಗೆ ಕಾರಣವೇನು?:

ಕುಟುಂಬದಲ್ಲಿನ ಬಡತನ, ಪೌಷ್ಟಿಕ ಆಹಾರದ ಕೊರತೆ, ಸೂಕ್ತ ಪಾಲನೆಯ ಸಮಸ್ಯೆ, ಗುಣಮಟ್ಟದ ಆರೋಗ್ಯ ಸೇವೆ ಪಡೆಯುವ ಸಾಮರ್ಥ್ಯ ಇಲ್ಲದೇ ಹೋಗಿದ್ದು ಜೊತೆಗೆ ಕೋವಿಡ್‌ನಿಂದಾಗಿ ಆರೋಗ್ಯ ವ್ಯವಸ್ಥೆಯು ಬಡ ಕುಟುಂಬಗಳಿಗೆ ಅಗತ್ಯ ಮತ್ತು ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗದೇ ಹೋಗಿದ್ದು, ಮಕ್ಕಳ ಸಾವಿನ ಪ್ರಮಾಣ ಹೆಚ್ಚಲು ಕಾರಣವಾಗಿರಬಹುದು ಎಂದು ವರದಿ ಹೇಳಿದೆ.

2,67,208: ವಿಶ್ವದಾದ್ಯಂತ ಮಕ್ಕಳ ಹೆಚ್ಚುವರಿ ಸಾವಿನ ಪ್ರಮಾಣ

1,13,141: ದಕ್ಷಿಣ ಏಷ್ಯಾದ 8 ದೇಶಗಳಲ್ಲಿ ಹೆಚ್ಚುವರಿ ಸಾವು

99,642: 2020ರಲ್ಲಿ ಭಾರತದಲ್ಲಿ ದಾಖಲಾದ ಹೆಚ್ಚುವರಿ ಸಾವು

Follow Us:
Download App:
  • android
  • ios