ಮುಂಬೈ(ಜ.22): ಮಾದಕ ವಸ್ತು ಉತ್ಪಾದನೆ, ಸಾಗಣೆ ಜಾಲದ ವಿರುದ್ಧ ಬೇಟೆ ಮುಂದುವರಿಸಿರುವ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ), ಕುಖ್ಯಾತ ಭೂಗತ ಪಾತಕಿ ಹಾಗೂ ದೇಶದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ದಾವೂದ್‌ ಇಬ್ರಾಹಿಂ ಜತೆ ನಂಟು ಹೊಂದಿರುವ ಡ್ರಗ್ಸ್‌ ಕಂಪನಿಯೊಂದನ್ನು ಮುಂಬೈನಲ್ಲಿ ಭೇದಿಸಿದೆ. ಈ ವೇಳೆ 1 ಕೋಟಿ ರು. ನಗದು ಹಾಗೂ ಅಪಾರ ಪ್ರಮಾಣದ ಮಾದಕ ವಸ್ತು ಮತ್ತು ಕೆಲವೊಂದು ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದೆ.

ಮುಂಬೈನ ಡೋಂಗ್ರಿಯಲ್ಲಿ ಈ ಡ್ರಗ್ಸ್‌ ಫ್ಯಾಕ್ಟರಿಯನ್ನು ಚಿಂಕೂ ಪಠಾಣ್‌ ಎಂಬಾತ ನಡೆಸುತ್ತಿದ್ದ. ಮುಂಬೈ ಭೂಗತ ಜಗತ್ತಿನ ದೊರೆ ಎನಿಸಿಕೊಂಡಿದ್ದ, ದಾವೂದ್‌ ಇಬ್ರಾಹಿಂಗೆ ಗುರು ಆಗಿದ್ದ ಕರೀಂ ಲಾಲಾ ಎಂಬಾತನ ಮೊಮ್ಮಗನೇ ಈ ಚಿಂಕೂ. ಈತನ ಕಂಪನಿ ಜತೆ ದಾವೂದ್‌ ಗ್ಯಾಂಗ್‌ಗೂ ನಂಟು ಇತ್ತು ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿಂಕೂವನ್ನು ಈಗಾಗಲೇ ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಪಠಾಣಿ ಗುಂಪೊಂದನ್ನು ಇಟ್ಟುಕೊಂಡು ಡ್ರಗ್ಸ್‌ ದಂಧೆಯನ್ನು ಈತ ನಡೆಸುತ್ತಿದ್ದ ಎಂದು ಅಧಿಕಾರಿ ವಿವರಿಸಿದ್ದಾರೆ.