ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 50ರ ಅಡಿಯಲ್ಲಿ ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು. ಇಡಿ ಅಧಿಕಾರಿಗಳು ಸೋನಿಯಾ ಗಾಂಧಿ ಅವರಿಗೆ ಈ ಪ್ರಶ್ನೆಗಳನ್ನು ಕೇಳಬಹುದು ಎಂದು ಅಂದಾಜಿಸಲಾಗಿದೆ.
ನವದೆಹಲಿ (ಜುಲೈ 21): ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿಚಾರಣೆಯನ್ನು ಮಹಿಳಾ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ಐವರು ಅಧಿಕಾರಿಗಳು ನಡೆಸುತ್ತಿದ್ದಾರೆ. ಹೆಚ್ಚುವರಿ ನಿರ್ದೇಶಕಿ ಮೋನಿಕಾ ಶರ್ಮಾ ಅವರು ತಂಡದ ನೇತೃತ್ವ ವಹಿಸಿದ್ದಾರೆ. 75ರ ಹರೆಯದ ಸೋನಿಯಾ ಗಾಂಧಿ ಅವರು ವಿಚಾರಣೆ ವೇಳೆ ಸುಸ್ತಾದರೆ ವಿಶ್ರಾಂತಿ ಪಡೆಯಲು ಅವಕಾಶ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧ್ಯಕ್ಷರು ಜಾರಿ ನಿರ್ದೇಶನಾಲಯಕ್ಕೆ ಕೆಲವು ಮನವಿಗಳನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಮಗಳು ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ಔಷಧಿಗಳನ್ನು ಇಟ್ಟುಕೊಂಡಿರುವುದರಿಂದ ಕಟ್ಟಡದಲ್ಲಿ ಉಳಿಯಲು ಅವಕಾಶ ನೀಡಬೇಕೆಂದು ಅವರು ಕೇಳಿಕೊಂಡಿದ್ದಾರೆ. ವಿಚಾರಣೆಗಾಗಿ ಕಾಂಗ್ರೆಸ್ ಅಧ್ಯಕ್ಷರು ವಿಶಾಲವಾದ ಮತ್ತು ಗಾಳಿ ಬರುವ ಕೊಠಡಿಯನ್ನು ಕೋರಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ತನ್ನೊಂದಿಗೆ ಸಂವಹನ ನಡೆಸುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ಅವರು ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಅವರ ವಿಚಾರಣೆಯನ್ನು ಐದು ದಿನಗಳ ಕಾಲ ಮಾಡಿದ್ದ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರ ವಿಚಾರದಲ್ಲಿ ವಿಚಾರಣೆಯ ಪ್ರಮಾಣವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೋನಿಕಾ ಶರ್ಮ ಅವರ ನೇತೃತ್ವದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 50ರ ಅಡಿಯಲ್ಲಿ ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತದೆ. ಇಡಿ (Enforcement Directorate) ಅಧಿಕಾರಿಗಳು ಸೋನಿಯಾ ಗಾಂಧಿ ಅವರಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಬಹುದು ಎಂದು ಅಂದಾಜು ಮಾಡಲಾಗಿದೆ.
1.ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ನಿಮ್ಮ ಸಂಬಂಧವೇನು?
2.ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್‌ನ 38 ಪ್ರತಿಶತದಷ್ಟು ಷೇರುದಾರರಾಗಲು ನೀವು ನಿರ್ಧರಿಸಲು ಕಾರಣವೇನು?
3. ಯಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಸ್ಥಾನವನ್ನು ವಹಿಸಿಕೊಳ್ಳಲು ಕಾರಣವೇನು? ಈ ಎಲ್ಲಾ ಹಣಕಾಸು ಅಕ್ರಮಗಳನ್ನು ನಡೆದ ವೇಳೆ ಸೋನಿಯಾ ಗಾಂಧಿ ಅವರೇ ಇದರ ನಿರ್ದೇಶಕಿಯಾಗಿದ್ದರು.
4. ಯಂಗ್ ಇಂಡಿಯನ್ ಕೆಲಸವೇನು? ಅದೊಂದು ದತ್ತಿ ಸಂಸ್ಥೆ ಆಗಿದ್ದರೆ ಯಂಗ್ ಇಂಡಿಯನ್‌ನಿಂದ ಮಹತ್ವದ ಚಾರಿಟಿ ಕೆಲಸಗಳೇಕೆ ನಡೆದಿಲ್ಲ?
5. ಕಾಂಗ್ರೆಸ್ ಮತ್ತು ಎಜೆಎಲ್ ನಡುವಿನ ವಹಿವಾಟಿನ ಬಗ್ಗೆ ನಿಮ್ಮ ಮಾತುಗಳೇನು?
6. ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ AJL ನ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎನ್ನುವುದು ನಿಮಗೆ ತಿಳಿದಿತ್ತೇ?
7. ಎಜೆಎಲ್‌ನ ಆಸ್ತಿಗಳ ಬಗ್ಗೆ ನಿಮಗೆ ತಿಳಿದಿದದೆಯೇ? ಗೊತ್ತಿದ್ದರೆ, ಈ ಆಸ್ತಿಗಳನ್ನು ಯಾವ ಉದ್ದೇಶಕ್ಕಾಗಿ ನೀವು ಬಳಕೆ ಮಾಡಿಕೊಂಡಿದ್ದೀರಿ?
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್, ರಾಜಕೀಯ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದ ಇತಿಹಾಸ!
ಹಲವು ಕಾಂಗ್ರೆಸ್ ನಾಯಕರ ಬಂಧನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herald Case) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Congress Chief Sonia Gandhi ) ಅವರನ್ನು ಇಡಿ ವಿಚಾರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪಕ್ಷದ ಹಿರಿಯ ನಾಯಕರಾದ ಶಶಿ ತರೂರ್, ಸಿಎಂ ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಚಾರಣೆ ನಡೆಸಲು ಇಡಿ ಸೋನಿಯಾ ಗಾಂಧಿಯ ಮನೆಗೆ ಹೋಗಬೇಕಿತ್ತು: ಅಶೋಕ್ ಗೆಹ್ಲೊಟ್
ಇದೇ ವೇಳೆ ಸೋನಿಯಾ ಗಾಂಧಿ ಅವರಿಗೆ 70 ವರ್ಷ ವಯಸ್ಸಾಗಿದೆ, ಅವರು ಮನೆಗೆ ಬಂದು ಇಡಿ ವಿಚಾರಣೆ ನಡೆಸಬೇಕಿತ್ತು ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ. ಈ ಹೊತ್ತಿನಲ್ಲಿ ಇಡಿ ದುರ್ಬಳಕೆಯಾಗುತ್ತಿರುವುದು ಗೊತ್ತೇ ಇದೆ, ಅದೇನು ಹೊಸದೇನಲ್ಲ ಎಂದು ಹೇಳಿದ್ದಾರೆ.
