Asianet Suvarna News Asianet Suvarna News
breaking news image

ಹ್ಯಾಟ್ರಿಕ್‌ ಪ್ರಧಾನಿಯಾಗಿ ಇಂದು ಮೋದಿ ಶಪಥ: ಎಚ್‌ಡಿಕೆ, ಬೊಮ್ಮಾಯಿಗೆ ಸಿಗುತ್ತಾ ಕೇಂದ್ರ ಸಚಿವ ಸ್ಥಾನ?

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಭಾಗ್ಯ ಪಡೆದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಭಾನುವಾರ ಅಸ್ತಿತ್ವಕ್ಕೆ ಬರಲಿದೆ. 

Narendra Modi set to take oath as prime minister for historic third term gvd
Author
First Published Jun 9, 2024, 6:45 AM IST

ನವದೆಹಲಿ (ಜೂ.09): ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಭಾಗ್ಯ ಪಡೆದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಭಾನುವಾರ ಅಸ್ತಿತ್ವಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿಮಂಡಲದ ಸದಸ್ಯರು ಸಂಜೆ 7.15ಕ್ಕೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವುದರೊಂದಿಗೆ ನೂತನ ಸರ್ಕಾರ ರಚನೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ನೆರೆಯ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಭೂತಾನ್‌, ಮಾರಿಷಸ್‌, ಸೀಶೆಲ್ಸ್‌ ದೇಶಗಳ ಮುಖ್ಯಸ್ಥರಿಗೂ ಆಹ್ವಾನ ನೀಡಲಾಗಿದ್ದು, ಅವರೆಲ್ಲಾ ಪ್ರಮಾಣ ವಚನಕ್ಕೆ ಸಾಕ್ಷಿಯಾಗಲಿದ್ದಾರೆ.

ಇದರೊಂದಿಗೆ ಪಂ. ಜವಾಹರಲಾಲ್‌ ನೆಹರು ಅವರ ನಂತರ ಸತತ 3ನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಲಿದ್ದಾರೆ. ಜತೆಗೆ ಸತತ 3 ಬಾರಿ ಪ್ರಧಾನಿಯಾದ ಏಕೈಕ ಕಾಂಗ್ರೆಸ್ಸೇತರ ನಾಯಕ ಎಂಬ ಕೀರ್ತಿಯನ್ನೂ ಮೋದಿ ಸಂಪಾದಿಸಲಿದ್ದಾರೆ. ಈ ಹಿಂದೆ 2014. 2019ರಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆದಿತ್ತು. ಮಿತ್ರರ ಬಲವೂ ಸೇರಿ ಎನ್‌ಡಿಎ ಮೈತ್ರಿಕೂಟ ಸಂಖ್ಯಾಬಲ 300ರ ಗಡಿ ದಾಟಿತ್ತು. ಆದರೆ ಈ ಬಾರಿ ಬಿಜೆಪಿ 240 ಮತ್ತು ಎನ್‌ಡಿಎ ಮೈತ್ರಿಕೂಟ 293 ಸ್ಥಾನ ಪಡೆದಿದೆ. ಹೀಗಾಗಿ 5 ವರ್ಷ ಪೂರ್ಣಕಾಲ ಮಿತ್ರಪಕ್ಷಗಳಾದ ಟಿಡಿಪಿ (16 ಸ್ಥಾನ), ಜೆಡಿಯು (12) ಸೇರಿದಂತೆ ಇತರೆ ಪಕ್ಷಗಳ ಬೆಂಬಲ ಅನಿವಾರ್ಯ. ಪ್ರಧಾನಿ ಮೋದಿ ಅವರ ಪಾಲಿಗೆ ಇದು ಮೊದಲ ಸಮ್ಮಿಶ್ರ ಸರ್ಕಾರದ ಅನುಭವ.

ವಾಲ್ಮೀಕಿ ನಿಗಮ ಕೇಸ್‌ ತನಿಖೆಗೆ ಸಿಬಿಐನಿಂದ ಪತ್ರ ಬಂದಿಲ್ಲ: ಸಚಿವ ಪರಮೇಶ್ವರ್‌

ಹೀಗಾಗಿಯೇ ಮಿತ್ರಪಕ್ಷಗಳು ಕೂಡಾ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಮತ್ತು ಮಹತ್ವದ ಖಾತೆಗಳಿಗೆ ಬೇಡಿಕೆ ಸಲ್ಲಿಸಿವೆ ಎಂಬ ಮಾತುಗಳಿಗೆ. ಹೀಗಾಗಿ ಈ ಕಸರತ್ತನ್ನು ಪ್ರಧಾನಿ ಮೋದಿ ಮತ್ತು ಬಿಜೆಪಿ ಹೇಗೆ ನಿರ್ವಹಿಸುತ್ತದೆ ಎಂಬುದು ಸದ್ಯದ ಕುತೂಹಲ. ಇದರ ಜೊತೆಗೆ ಈ ಬಾರಿ ಕರ್ನಾಟಕದಿಂದ ಬಿಜೆಪಿ 17 ಮತ್ತು ಮಿತ್ರಪಕ್ಷ ಜೆಡಿಎಸ್‌ನ ಇಬ್ಬರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಯಾರಿಗೆ? ಯಾವ ಖಾತೆ ಸಿಗಬಹುದು ಎಂಬ ಕುತೂಹಲ ಇದೆ. ಶುಕ್ರವಾರ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಕೂಟದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಬಳಿಕ ಎನ್‌ಡಿಎ ನಿಯೋಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿತ್ತು. ಇದನ್ನು ಮನ್ನಿಸಿದ ಮುರ್ಮು ಅವರು, ಮೋದಿ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು.

ಈ ವರ್ಷ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್‌ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಇದೆ. ಈ ಮೂರೂ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಹಿನ್ನಡೆ ಸಾಧಿಸಿದೆ. ಹೀಗಾಗಿ ಸಂಪುಟದಲ್ಲಿ ಈ ರಾಜ್ಯಗಳಿಗೆ ಆದ್ಯತೆ ಸಿಗುವ ನಿರೀಕ್ಷೆ ಇದೆ. ಜೊತೆಗೆ ಮುಂದಿನ ವರ್ಷ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆ ಇದ್ದು ಅದನ್ನೂ ಬಿಜೆಪಿ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ಹಂಚಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಗೃಹ, ಹಣಕಾಸು, ವಿದೇಶಾಂಗ, ಸಂಸದೀಯ ರಕ್ಷಣೆ, ರಸ್ತೆ ಸಾರಿಗೆ, ಶಿಕ್ಷಣ ಖಾತೆಗಳನ್ನು ಬಿಜೆಪಿ ತನ್ನ ಬಳಿಯೇ ಇಟ್ಟುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಉಳಿದಂತೆ ಕೃಷಿ, ಗ್ರಾಮೀಣಾಭಿವೃದ್ಧಿ, ಐಟಿ, ಆರೋಗ್ಯ ಖಾತೆಗಳನ್ನು ಮಿತ್ರರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.

ಯಾರಿಗೆ ಸ್ಥಾನ?: ಹಾಲಿ ಕೇಂದ್ರ ಸಚಿವ ಸಂಪುಟದ ಭಾಗವಾಗಿರುವ ಅಮಿತ್‌ ಶಾ, ರಾಜ್‌ನಾಥ್‌ ಸಿಂಗ್‌, ಪಿಯೂಷ್‌ ಗೋಯಲ್‌, ನಿತಿನ್‌ ಗಡ್ಕರಿ, ಅನುಪ್ರಿಯಾ ಪಟೇಲ್‌, ಜ್ಯೋತಿರಾಧಿತ್ಯ ಸಿಂಧಿಯಾ, ಕಿಶನ್‌ ರೆಡ್ಡಿ, ಧಮೇಂದ್ರ ಪ್ರಧಾನ್‌, ಗಜೇಂದ್ರ ಸಿಂಗ್‌ ಶೆಖಾವತ್‌, ಸುರೇಶ್‌ ಗೋಪಿ, ಪ್ರಹ್ಲಾದ್‌ ಜೋಶಿ, ಸರ್ಬಾನಂದ್‌ ಸೋನೋವಾಲ್‌, ಕಿರಣ್‌ ರಿಜಿಜು ಮೊದಲಾದವರು ಹುದ್ದೆಯಲ್ಲಿ ಮುಂದುವರೆಯುವ ಸಾಧ್ಯತೆ ನಿಚ್ಚಳವಾಗಿದೆ.

ನಿಗಮಗಳಿಂದ ಪ್ರಸ್ತಾವನೆ ಬಂದರೆ ಬಸ್‌ ಟಿಕೆಟ್‌ ದರ ಏರಿಕೆ ನಿರ್ಧಾರ: ಸಚಿವ ರಾಮಲಿಂಗಾರೆಡ್ಡಿ

ಸಂಭಾವ್ಯ ಕೇಂದ್ರ ಸಚಿವರು
ಕರ್ನಾಟಕ: ಎಚ್‌.ಡಿ.ಕುಮಾರಸ್ವಾಮಿ (ಜೆಡಿಎಸ್‌) , ಪ್ರಹ್ಲಾದ್‌ ಜೋಶಿ, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಪಿ.ಸಿ.ಮೋಹನ್‌ (ಎಲ್ಲರೂ ಬಿಜೆಪಿ).

ಉತ್ತರಪ್ರದೇಶ: ರಾಜ್‌ನಾಥ್‌ ಸಿಂಗ್‌, ಜಿತಿನ್‌ ಪ್ರಸಾದ್‌ (ಇಬ್ಬರೂ ಬಿಜೆಪಿ) ಅನುಪ್ರಿಯಾ ಪಟೇಲ್‌ (ಅಪ್ನಾದಳ), ಜಯಂತ್‌ ಚೌಧರಿ (ಆರ್‌ಎಲ್‌ಡಿ)

ಗುಜರಾತ್‌: ಅಮಿತ್‌ ಶಾ, ಮನಸುಖ್ ಮಾಂಡವೀಯ (ಇಬ್ಬರೂ ಬಿಜೆಪಿ)

ಬಿಹಾರ: ನಿತ್ಯಾನಂದ್‌ ರಾಯ್‌ (ಬಿಜೆಪಿ), ರಾಜೀವ್‌ ಪ್ರತಾಪ್‌ ರೂಡಿ (ಬಿಜೆಪಿ), ಸಂಜಯ್‌ ಜೈಸ್ವಾಲ್‌ (ಬಿಜೆಪಿ), ಲಲನ್‌ ಸಿಂಗ್‌, ಸಂಜಯ್‌ ಕುಮಾರ್‌ ಝಾ, ರಾಮ್‌ನಾಥ್‌ ಠಾಕೂರ್‌, ಸುನಿಲ್ ಕುಮಾರ್‌, ಕುಶಲೇಂದ್ರ ಕುಮಾರ್‌ (ಎಲ್ಲರೂ ಜೆಡಿಯು), ಚಿರಾಗ್‌ ಪಾಸ್ವಾನ್‌ (ಎಲ್‌ಜೆಪಿ), ಜೀತನ್‌ ರಾಂ ಮಾಂಝಿ (ಎಚ್‌ಎಎಂ)

ಮಹಾರಾಷ್ಟ್ರ: ಪ್ರತಾಪ್‌ರಾವ್‌ ಜಾಧವ್‌, ನಿತಿನ್‌ ಗಡ್ಕರಿ, ಪಿಯೂಷ್‌ ಗೋಯಲ್‌ (ಎಲ್ಲರೂ ಬಿಜೆಪಿ)

ಮಧ್ಯಪ್ರದೇಶ: ಶಿವರಾಜ್‌ ಸಿಂಗ್‌ ಚೌಹಾಣ್‌, ಜ್ಯೋತಿರಾದಿತ್ಯ ಸಿಂಧಿಯಾ (ಇಬ್ಬರೂ ಬಿಜೆಪಿ)

ತೆಲಂಗಾಣ: ಕಿಶನ್‌ ರೆಡ್ಡಿ, ರಾಜೇಂದರ್‌, ಡಿ.ಕೆ. ಅರುಣಾ, ಬಂಡಿ ಸಂಜಯ್‌ (ಎಲ್ಲರೂ ಬಿಜೆಪಿ)

ಒಡಿಶಾ: ಧಮೇಂದ್ರ ಪ್ರಧಾನ್‌, ಮನಮೋಹನ್‌ ಸಮಲ್‌ (ಇಬ್ಬರೂ ಬಿಜೆಪಿ)

ರಾಜಸ್ಥಾನ: ಗಜೇಂದ್ರ ಸಿಂಗ್‌ ಶೆಖಾವತ್‌, ದುಷ್ಯಂತ್‌ ಸಿಂಗ್‌ (ಇಬ್ಬರೂ ಬಿಜೆಪಿ)

ಕೇರಳ: ಸುರೇಶ್‌ ಗೋಪಿ (ಬಿಜೆಪಿ)

ಪಶ್ಚಿಮ ಬಂಗಾಳ: ಶಂತನು ಠಾಕೂರ್‌ (ಬಿಜೆಪಿ)

ಆಂಧ್ರಪ್ರದೇಶ: ಡಿ. ಪುರಂದೇಶ್ವರಿ (ಬಿಜೆಪಿ), ಹಶೀಶ್‌ ಬಾಲಯೋಗಿ, ರಾಮಮೋಹನ ನಾಯ್ಡು, ದಗ್ಗುಮಲ್ಲ ಪ್ರಸಾದ್‌ (ಟಿಡಿಪಿ)

ಜಮ್ಮು: ಜಿತೇಂದ್ರ ಸಿಂಗ್‌ (ಬಿಜೆಪಿ), ಜುಗಲ್‌ ಕಿಶೋರ್‌ ಶರ್ಮಾ (ಬಿಜೆಪಿ)

ಅಸ್ಸಾಂ: ಸರ್ಬಾನಂದ ಸೋನೋವಾಲ್‌, ಬಿಜುಲಿ ಕಲಿತಾ ಮೇಧಿ (ಇಬ್ಬರೂ ಬಿಜೆಪಿ)

ಅರುಣಾಚಲ ಪ್ರದೇಶ: ಕಿರಣ್‌ ರಿಜಿಜು (ಬಿಜೆಪಿ)

ತ್ರಿಪುರಾ: ಬಿಪ್ಲಬ್‌ ದೇವ್‌ (ಬಿಜೆಪಿ)

Latest Videos
Follow Us:
Download App:
  • android
  • ios