ನವದೆಹಲಿ(ಜೂ.2): ‘ಯಾರೊಬ್ಬರೂ ಭಾರತೀಯ ಭೂಭಾಗಕ್ಕೆ ಪ್ರವೇಶಿಸಿಲ್ಲ ಅಥವಾ ದೇಶದ ಯಾವುದೇ ಸೇನಾ ನೆಲೆಯನ್ನು ವಶಪಡಿಸಿಕೊಂಡಿಲ್ಲ’ ಎಂದು ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಕಿಡಿಗೇಡಿತನದ ವ್ಯಾಖ್ಯಾನ ನೀಡುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

ಮೋದಿ ಅವರ ಹೇಳಿಕೆ ಕುರಿತು ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕಾರ್ಯಾಲಯ, ಗಲ್ವಾನ್‌ ಕಣಿವೆಯಲ್ಲಿ ಚೀನಾ ಸೇನೆಯ ಅತಿಕ್ರಮಣ ಪ್ರಯತ್ನವನ್ನು ವೀರಾವೇಶದಿಂದ ನಮ್ಮ ಸಶಸ್ತ್ರಪಡೆಗಳು ವಿಫಲಗೊಳಿಸಿವೆ ಎಂಬರ್ಥದಲ್ಲಿ ಮೋದಿ ಹೇಳಿದ್ದಾರೆ. ಯೋಧರ ಶೌರ್ಯ ಹಾಗೂ ದೇಶಭಕ್ತಿಗೆ ಅವರು ಗೌರವ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಕಿಡಿಗೇಡಿತನದ ವ್ಯಾಖ್ಯಾನ ನೀಡಲು ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದೆ.

ಈ ಕುರಿತು ಶನಿವಾರ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ಕಚೇರಿ ‘ವಾಸ್ತವ ಗಡಿ ನಿಯಂತ್ರಣ ರೇಖೆಯ ನಮ್ಮ ಭಾಗದಲ್ಲಿ ಚೀನಿಯರು ಇಲ್ಲ ಎಂಬ ಹೇಳಿಕೆಯು, ಗಲ್ವಾನ್‌ ಕಣಿವೆಯಲ್ಲಿ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಚೀನಾ ಯೋಧರನ್ನು ಹಿಮ್ಮೆಟ್ಟಿಸಿ ನಮ್ಮ ಯೋಧರು ತೋರಿದ ಶೌರ್ಯದಿಂದಾಗಿ ನಿರ್ಮಾಣವಾಗಿರುವ ಪ್ರಸಕ್ತ ಪರಿಸ್ಥಿತಿಗೆ ಸಂಬಂಧಿಸಿದ್ದು’ ಎಂದು ಸ್ಪಷ್ಟಪಡಿಸಿದೆ.

ಶುಕ್ರವಾರದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಅವರು ‘ನಮ್ಮ ವ್ಯಾಪ್ತಿಯ ಪ್ರದೇಶದಲ್ಲಿ ಯಾರೂ ಪ್ರವೇಶಿಸಿಲ್ಲ ಮತ್ತು ನಮ್ಮ ಯಾವುದೇ ಪ್ರದೇಶವನ್ನು ಯಾರೂ ವಶಪಡಿಸಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಪ್ರಧಾನಿ ಈ ಹೇಳಿಕೆಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್‌, ‘ಚೀನಾಕ್ಕೆ ಭಾರತ ತನ್ನ ಭೂಭಾಗ ಬಿಟ್ಟುಕೊಟ್ಟಿದೆ. ಭಾರತದ ಭೂಭಾಗದೊಳಗೆ ಚೀನಿಯರು ಪ್ರವೇಶ ಮಾಡಿಲ್ಲ ಎಂದಾದಲ್ಲಿ 20 ಭಾರತೀಯ ಯೋಧರು ಹತರಾಗಿದ್ದು ಎಲ್ಲಿ? ಎಂದು ಪ್ರಶ್ನಿಸಿತ್ತು.

ಈ ಹಿನ್ನೆಲೆಯಲ್ಲಿ ಶನಿವಾರ ಹೇಳಿಕೆ ಬಿಡುಗಡೆ ಮಾಡಿದ ಪ್ರಧಾನಿ ಕಾರ್ಯಾಲಯ, ಗಡಿ ನಿಯಂತ್ರಣ ರೇಖೆಯ ಸ್ವಲ್ಪ ದೂರದಲ್ಲಿ ಚೀನಿಯರು ಟೆಂಟ್‌ ನಿರ್ಮಿಸುವ ಯತ್ನ ಆರಂಭಿಸಿದ್ದರು. ಇದಕ್ಕೆ ಭಾರತದ ಆಕ್ಷೇಪದ ಹೊರತಾಗಿಯೂ ಅವರು ತಮ್ಮ ಯತ್ನದಿಂದ ಹಿಂದೆ ಸರಿದಿರಲಿಲ್ಲ. ಅಲ್ಲದೆ ಈ ವೇಳೆ ಅವರು ಗಡಿದಾಟುವ ಯತ್ನವನ್ನೂ ಮಾಡಿದ್ದರು. ಈ ವೇಳೆ ಭಾರತೀಯ ಯೋಧರು ತಮ್ಮ ಶೌರ್ಯದ ಮೂಲಕ, ಚೀನಿ ಯೋಧರನ್ನು ಹಿಮ್ಮೆಟ್ಟಿಸಿದ್ದರು. ಹೀಗೆ ನಮ್ಮ ಯೋಧರು ನಮ್ಮ ಗಡಿಯನ್ನು ರಕ್ಷಿಸುತ್ತಿರುವ ಹೊತ್ತಿನಲ್ಲಿ, ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂಥ ಅನಾವಶ್ಯಕ ವಿವಾದಗಳನ್ನು ಹುಟ್ಟುಹಾಕಲಾಗುತ್ತಿದೆ. ನಮ್ಮ ಗಡಿಗೆ ನುಗ್ಗುವ ಯತ್ನ ಮಾಡಿದವರಿಗೆ ನಮ್ಮ ಯೋಧರು ತಕ್ಕ ಪಾಠ ಕಲಿಸಿದ ಒಟ್ಟು ಘಟನೆಯ ಸಾರಾಂಶವನ್ನ ಪ್ರಧಾನಿ ಮೋದಿ ತಮ್ಮ ಮಾತಿನಲ್ಲಿ ಹೇಳಿದ್ದರು’ ಎಂದು ಸ್ಪಷ್ಟಪಡಿಸಿದೆ.