ಸರ್ಕಾರ ರಚನೆಗೆ ಮೋದಿ ನೇತೃತ್ವದಲ್ಲಿ NDA ಸಭೆ,ಚಂದ್ರಬಾಬು-ನಿತೀಶ್ ಭಾಗಿ!
ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಿಕ್ಕಿರುವ ಎನ್‌ಡಿಎ ಒಕ್ಕೂಟ ಇದೀಗ ಸರ್ಕಾರ ರಚನೆಯ ಮಹತ್ವದ ಸಭೆ ನಡೆಸುತ್ತಿದೆ. ಮೋದಿ 3.0 ಸರ್ಕಾರ ರಚನೆಗೆ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಭಾಗಿಯಾಗಿದ್ದಾರೆ.
ನವದೆಹಲಿ(ಜೂನ್ 5) ಲೋಕಸಭಾ ಚುನಾವಣೆಯ ಹಗ್ಗಜಗ್ಗಾಟದಲ್ಲಿ ಎನ್‌ಡಿಎ ಮೈತ್ರಿ ಬಹುಮತ ಪಡೆದಿದೆ. ಇಂಡಿಯಾ ಒಕ್ಕೂಟ ಪ್ರಬಲ ಪೈಪೋಟಿ ನೀಡಿದ ಕಾರಣ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲು ವಿಫಲವಾಗಿದೆ. ಇದರ ಬೆನ್ನಲ್ಲೇ ಎನ್‌ಡಿಎ ಕೂಡಟದ ಪಕ್ಷಗಳನ್ನು ಸೆಳೆದು ಸರ್ಕಾರ ರಚನೆಗೆ ಇಂಡಿಯಾ ಒಕ್ಕೂಟ ಕಸರತ್ತು ನಡೆಸುತ್ತಿದೆ. ಇದೀಗ ಎನ್‌ಡಿಎ ಒಕ್ಕೂಟ ದೆಹಲಿಯಲ್ಲಿ ಸರ್ಕಾರ ರಚನೆಗೆ ಮಹತ್ವದ ಸಭೆ ನಡೆಸುತ್ತಿದೆ. ಕೆಲವೇ ಹೊತ್ತಲ್ಲಿ ಈ ಸಭೆ ಆರಂಭಗೊಳ್ಳಲಿದ್ದು, ಸರ್ಕಾರ ರಚನೆಯ ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಭಾಗಿಯಾಗಿದ್ದಾರೆ.
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ದೆಹಲಿಯ ಪ್ರಧಾನಿ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಅಮಿತ್ ಶಾ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಟಿಡಿಪಿ ಚಂದ್ರಬಾಬು ನಾಯ್ಡು ಸೇರಿದಂತೆ ಎನ್‌ಡಿಎ ಮೈತ್ರಿ ಪಕ್ಷಗಳ ನಾಯಕರು ಭಾಗಿಯಾಗಿದ್ದಾರೆ. ರಾಜ್ಯದಿಂದ ಹೆಚ್‌ಡಿ ಕುಮಾರಸ್ವಾಮಿ ಪಾಲ್ಗೊಂಡಿದ್ದಾರೆ. ಪ್ರಮುಖವಾಗಿ ಸರ್ಕಾರ ರಚನೆ ಹಾಗೂ ಖಾತೆ ಹಂಚಿಕೆ ಕುರಿತು ಈ ಸಭೆಯಲ್ಲಿ ಚರ್ಚೆಯಾಗಲಿದೆ.
ಪ್ರಮುಖ ಹುದ್ದೆಗಳಿಗೆ ನಿತೀಶ್, ನಾಯ್ಡು ಭಾರಿ ಚೌಕಾಸಿ? ಸ್ಪೀಕರ್ ಹುದ್ದೆ ಮೇಲೇಕೆ ಮಿತ್ರಪಕ್ಷಗಳ ಕಣ್ಣು?
ಎನ್‌ಡಿಎ ಸರ್ಕಾರ ರಚನೆಗೆ ಆಂಧ್ರ ಪ್ರದೇಶದ ಟಿಡಿಪಿ ಹಾಗೂ ಬಿಹಾರದ ಜೆಡಿಯು ಬೆಂಬಲ ಅತ್ಯಂತ ಅವಶ್ಯಕವಾಗಿದೆ. ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ತಮ್ಮತ್ತ ಸೆಳೆಯಲು ಇಂಡಿಯಾ ಒಕ್ಕೂಟ ಕಸರತ್ತು ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಇಬ್ಬರೂ ನಾಯಕರು ಎನ್‌ಡಿಎ ಒಕ್ಕೂಟದಲ್ಲಿ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರೆ.
ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ರಾಜೀನಾಮೆ ನೀಡಿದ್ದಾರೆ. ಸರ್ಕಾರ ರಚನೆ ವರೆಗೆ ನಿಯೋಜಿತ ಪ್ರಧಾನಿಯಾಗಿ ಮುಂದುವರಿಯಲು ರಾಷ್ಟ್ರಪತಿ ಸೂಚನೆ ನೀಡಿದ್ದಾರೆ. ಇದೀಗ ಪ್ರಧಾನಿ ಮೋದಿ ನೇತೃತ್ವದಲ್ಲಿ 3ನೇ ಬಾರಿಗೆ ಸರ್ಕಾರ ರಚನೆಗೆ ಮಹತ್ವದ ಚರ್ಚೆಗಳು ನಡೆಯಲಿದೆ. ಇತ್ತ ಕಿಂಗ್ ಮೇಕರ್ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 240 ಸ್ಥಾನ ಗೆದ್ದುಕೊಂಡಿದೆ. ಸರ್ಕಾರ ರಚನೆಗೆ 272 ಸ್ಥಾನದ ಅವಶ್ಯಕತೆ ಇದೆ. 2019ರ ವಿಧಾನಸಭೆ ಚುನಾವಣೆಯಲ್ಲಿ 303 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 240ಕ್ಕೆ ಕುಸಿದಿದೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 292 ಸ್ಥಾನ ಗೆದ್ದು ಸರ್ಕಾರ ರಚಿಸಲು ಸರ್ಕಸ್ ನಡೆಸುತ್ತಿದೆ.
India General Election Results 2024: ವಾಟ್ಸ್ ಆ್ಯಪ್ನಲ್ಲಿ ಅತಿ ಹೆಚ್ಚು ಶೇರ್ ಆದ ಮೆಸೇಜ್, ನಿಮಗೂ ಬಂತಾ?