ಏಕಕಾಲದಲ್ಲಿ 11 ಸಾವಿರ ಕಲಾವಿದರಿಂದ ಬಿಹು ನೃತ್ಯ, ಗಿನ್ನೆಸ್ ವಿಶ್ವದಾಖಲೆ!
ಅಸ್ಸಾಂನಲ್ಲಿ ಬರೋಬ್ಬರಿ 11 ಸಾವಿರ ಕಲಾವಿದರು ಏಕಕಾಲದಲ್ಲಿ ಬಿಹು ನೃತ್ಯ ಮಾಡಿದ್ದು, ಗಿನ್ನೆಸ್ ವಿಶ್ವದಾಖಲೆ ಪುಟ ಸೇರುವ ಸಾಧ್ಯತೆ ಇದೆ. ಪ್ರಧಾನ ನರೇಂದ್ರ ಮೋದಿ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದೇ ವೇಳೆ ಈಶಾನ್ಯದ ಮೊದಲ ಏಮ್ಸ್‌ಗೆ ಗುವಾಹಟಿಯಲ್ಲಿ ಪ್ರಧಾನಿ ಮೋದಿ ಅನಾವರಣ ಮಾಡಿದರು.
ಗುವಾಹಟಿ (ಏ.14): ವಿಶ್ವದ ಅತೀದೊಡ್ಡ ಬಿಹು ಪ್ರದರ್ಶನದ ಗಿನ್ನೆಸ್ ವಿಶ್ವದಾಖಲೆ ನಿರ್ಮಾಣವಾದ ಕಾರ್ಯಕ್ರಮದಲ್ಲಿ ಬರೋಬ್ಬರಿ 11 ಸಾವಿರಕ್ಕೂ ಅಧಿಕ ಕಲಾವಿದರು ಏಕಕಾಲದಲ್ಲಿ ನೃತ್ಯ ಮಾಡಿದರು. ಬಿಹು ನೃತ್ಯವೀಗ ಹೊಸ ವಿಶ್ವದಾಖಲೆ ನಿರ್ಮಿಸಿದೆ. ಇದು ವಿಶ್ವದ ಅತೀದೊಡ್ಡ ಜಾನಪದ ನೃತ್ಯ ಕಾರ್ಯಕ್ರಮ ಎನ್ನುವ ಗಿನ್ನೆಸ್ ದಾಖಲೆಯನ್ನು ನಿರ್ಮಾಣ ಮಾಡಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶುಕ್ರವಾರ ಅಸ್ಸಾಂನ ಪ್ರಖ್ಯಾತ ಬಿಹು ಉತ್ಸವದಲ್ಲಿ ಭಾಗಿಯಾಗುವ ಸಲುವಾಗಿಯೇ ಪ್ರಧಾನಿ ಅಸ್ಸಾಂಗೆ ಆಗಮಿಸಿದರು. ಈ ವೇಳೆ 14,300 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಚಾಲನೆ ನೀಡಿದರು. ಮೊದಲಿಗೆ ಈಶಾನ್ಯ ಭಾಗದ ಮೊದಲ ಏಮ್ಸ್‌ಅನ್ನು ಮೋದಿ ಅನಾವರಣ ಮಾಡಿದರು. ಅದರೊಂದಿಗೆ ನಲ್ಬರಿ, ನಾಗೌನ್ ಹಾಗೂ ಕೊಕ್ರಾಜರ್‌ನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳಿಗೆ ವರ್ಚುವಲ್ ಆಗಿ ಅನಾವರಣ ಮಾಡಿದರು.ಸಂಜೆ 6 ಗಂಟೆಗೆ ಸುರಸಜೈ ಸ್ಟೇಡಿಯಂ ತಲುಪಿದ ಪ್ರಧಾನಿ, ಅಲ್ಲಿ 31 ಜಿಲ್ಲೆಗಳ 11 ಸಾವಿರಕ್ಕೂ ಹೆಚ್ಚು ಕಲಾವಿದರು ಒಟ್ಟಾಗಿ ಮಾಡಿದ ಬಿಹು ನೃತ್ಯವನ್ನು ವೀಕ್ಷಿಸಿದರು. ಈ ಕಾರ್ಯಕ್ರಮದ ಮೂಲಕ, ಅಸ್ಸಾಂನ ಜಾನಪದ ನೃತ್ಯವಾದ ಬಿಹುವನ್ನು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ನೋಂದಾಯಿಸುವ ಪ್ರಯತ್ನ ನಡೆಯಲಿದೆ.. ಇದಕ್ಕೂ ಮುನ್ನ ಅವರು ಆಪ್ಕೆ ದ್ವಾರ ಆಯುಷ್ಮಾನ್ ಅಭಿಯಾನವನ್ನೂ ಆರಂಭಿಸಿದ್ದರು. ಅದಲ್ಲದೆ, ಹೈಕೋರ್ಟ್‌ನ ಪ್ಲಾಟಿನಂ ಜುಬಿಲಿ ಆಚರಣೆಯಲ್ಲಿ ಮೋದಿ ಭಾಗವಹಿಸಿದ್ದರು.
ಗುವಾಹಟಿಯಲ್ಲಿ ಈಶಾನ್ಯದ ಮೊದಲ ಏಮ್ಸ್: ಬೆಳಗ್ಗೆ ಗುವಾಹಟಿಯಲ್ಲಿ ಪ್ರಧಾನಿ ಏಮ್ಸ್ ಉದ್ಘಾಟಿಸಿದರು. ಇದು ಈಶಾನ್ಯದ ಮೊದಲ ಏಮ್ಸ್ ಆಗಿದೆ. ಇದಾದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿದರು. ಜನರನ್ನು ಆಳಬೇಕು ಎನ್ನುವ ಮನೋಭಾವದಲ್ಲಿ ಅಧಿಕಾರ ನಡೆಸಿದ ಪಕ್ಷಗಳೇ ಇಂದು ದೇಶವನ್ನು ಹಾಳು ಮಾಡಿದೆ ಎಂದು ಹೇಳಿದರು. ಬಿಹು ಸಂದರ್ಭದಲ್ಲಿಯೇ ಅಸ್ಸಾಂನ ಈಶಾನ್ಯದ ಆರೋಗ್ಯ ಮೂಲಸೌಕರ್ಯ ಇಂದು ಹೊಸ ಶಕ್ತಿಯನ್ನು ಪಡೆದುಕೊಂಡಿದೆ. ಇಂದು ಈಶಾನ್ಯವು ತನ್ನ ಮೊದಲ ಏಮ್ಸ್ ಅನ್ನು ಪಡೆದುಕೊಂಡಿದೆ ಮತ್ತು ಅಸ್ಸಾಂ ಮೂರು ಹೊಸ ವೈದ್ಯಕೀಯ ಕಾಲೇಜುಗಳನ್ನು ಪಡೆದುಕೊಂಡಿದೆ.
ನಾವು ನಿಮ್ಮ ಸೇವಕರು ಎಂಬ ಮನೋಭಾವದಿಂದ ಬಿಜೆಎಪಿ ಕೆಲಸ ಮಾಡುತ್ತದೆ. ಅದಕ್ಕಾಗಿಯೇ ಈಶಾನ್ಯವು ನಮ್ಮಿಂದ ದೂರವಿಲ್ಲ ನಮ್ಮೊಂದಿಗೆ ಸೇರಿದೆ ಎನ್ನುವ ಭಾವನೆ ನಮಗಿದೆ. ಇಂದು, ಈಶಾನ್ಯದ ಜನರು ಮುಂದೆ ಹೋಗಿ ಅಭಿವೃದ್ಧಿಯ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಭಾರತದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಷಹಜಹಾನ್-ಮಮ್ತಾಜ್ ಪ್ರೀತಿ ಬಗ್ಗೆ ತನಿಖೆ ಮಾಡಿ, ತಾಜ್ ಮಹಲ್ ಧ್ವಂಸ ಮಾಡಿ: ಅಸ್ಸಾಂ ಬಿಜೆಪಿ ಶಾಸಕ!
ಹಿಂದಿನ ಸರ್ಕಾರಗಳ ನೀತಿಗಳಿಂದಾಗಿ ನಮ್ಮಲ್ಲಿ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಸಂಖ್ಯೆ ಕಡಿಮೆ ಇತ್ತು. ಇದು ಭಾರತದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗೆ ಪ್ರಮುಖ ಅಡ್ಡಿಯಾಗಿತ್ತು. ಆದ್ದರಿಂದ ಕಳೆದ ಒಂಬತ್ತು ವರ್ಷಗಳಲ್ಲಿ, ನಮ್ಮ ಸರ್ಕಾರವು ವೈದ್ಯಕೀಯ ವೃತ್ತಿಪರರನ್ನು ಹೆಚ್ಚಿಸಲು ಕೆಲಸ ಮಾಡಿದೆ. 2014 ರ ಹಿಂದಿನ 10 ವರ್ಷಗಳಲ್ಲಿ ಕೇವಲ 150 ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿತ್ತು. ಆದರೆ ಕಳೆದ 9 ವರ್ಷಗಳಲ್ಲಿ ನಮ್ಮ ಸರ್ಕಾರದಲ್ಲಿ ಸುಮಾರು 300 ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಎಂಬಿಬಿಎಸ್ ಸೀಟುಗಳು ದ್ವಿಗುಣಗೊಂಡಿದೆ. ಇಂದು ಒಂದು ಲಕ್ಷಕ್ಕೂ ಅಧಿಕ ಎಂಬಿಬಿಎಸ್ ಸೀಟುಗಳಿವೆ ಎಂದು ಹೇಳಿದ್ದಾರೆ.
Droupadi Murmu: ಸುಖೋಯ್ ಯುದ್ಧವಿಮಾನದಲ್ಲಿ ಸುಪ್ರೀಂ ಕಮಾಂಡರ್ ಹಾರಾಟ!
ಅಸ್ಸಾಂನಲ್ಲಿ 'ಆಪ್ಕೆ ದ್ವಾರ ಆಯುಷ್ಮಾನ್' ಅಭಿಯಾನಕ್ಕೂ ಪ್ರಧಾನಿ ಚಾಲನೆ ನೀಡಿದರು. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಇದರ ನಂತರ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುಮಾರು 1.1 ಕೋಟಿ ಎಬಿ-ಪಿಎಂಜೆಎವೈ ಕಾರ್ಡ್‌ಗಳನ್ನು ವಿತರಿಸಲಾಯಿತು. ಇದಲ್ಲದೇ ಅಸ್ಸಾಂ ಅಡ್ವಾನ್ಸ್ಡ್ ಹೆಲ್ತ್ ಕೇರ್ ಇನ್ನೋವೇಶನ್ ಇನ್‌ಸ್ಟಿಟ್ಯೂಟ್ (AAHII) ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಿದರು.