ವಂದೇ ಭಾರತ್ ಎಕ್ಸ್‌ಪ್ರೆಸ್ ಡಿಕ್ಕಿ ಪ್ರಕರಣಗಳು ಮುಂದುವರಿಯುತ್ತಲೇ ಇದೆ. ಇತ್ತೀಚೆಗೆ ಮುಂಬೈ ಹಾಗೂ ಗಾಂಧಿನಗರ ನಡುವಿನ ಟ್ರೇನ್ ಇದೇ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದ ಬೆಂಗಳೂರು ಮಾರ್ಗವಾಗಿ ಮೈಸೂರು-ಚೆನ್ನೈ ನಡುವೆ ಸಂಚಾರ ಮಾಡುವ ದಕ್ಷಿಣ ಭಾರತದ ಮೊಟ್ಟ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಹಸುವಿಗೆ ಡಿಕ್ಕಿ ಹೊಡೆದಿದೆ.
ಚೆನ್ನೈ (ನ.18): ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನಾವರಣಗೊಂದ ಒಂದೇ ವಾರದಲ್ಲಿ ಬೆಂಗಳೂರು ಮಾರ್ಗವಾಗಿ ಸಂಚಾರ ಮಾಡುವ ಮೈಸೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಕರುವಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಗುರುವಾರ ಈ ಘಟನೆ ನಡೆದಿದ್ದು, ಪ್ರಕರಣದಲ್ಲಿ ಕರು ಮೃತಪಟ್ಟಿದ್ದು, ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ತಮಿಳುನಾಡಿದ ಆರಕ್ಕೋಣಂ ಬಳಿ ಈ ಘಟನೆ ನಡೆದಿದ್ದು, ರೈಲಿನ ಮುಂಭಾಗ ಜಜ್ಜಿ ಹೋಗಿದೆ. ತನ್ನ ಪ್ರಯಾಣದಲ್ಲಿ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ನಿಲುಗಡೆಯನ್ನು ತೆಗೆದುಕೊಳ್ಳುವ ಸೆಮಿ-ಹೈ-ಸ್ಪೀಡ್ ರೈಲು ಅಪಘಾತದಿಂದ ತನ್ನ ಮುಂಭಾಗದ ನೋಸ್‌ನಲ್ಲಿ ಜಜ್ಜಿ ಹೋಗಿದೆ. ಆದರೆ ಕರು ಸಾವನ್ನಪ್ಪಿದೆ. ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 90 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು ಎಂದು ವರದಿಯಾಗಿದೆ. ದೇಶದ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಇದಾಗಿದ್ದು, ಈ ಪ್ರದೇಶದಲ್ಲಿ ಘಟ್ಟ ಮಾರ್ಗ ಹಾಗೂ ವಕ್ರಾಕೃತಿಯ ತಿರುವುಗಳು ಕೂಡ ಸಾಕಷ್ಟು ಸಿಗುತ್ತವೆ. ಆದ್ದರಿಂದ ಈ ರೈಲಿನ ಸರಾಸರಿ ವೇಗ ಈ ಪ್ರದೇಶಲ್ಲಿ ಗಂಟೆಗೆ 75 ರಿಂದ 77 ಕಿಲೋಮೀಟರ್ ಎಂದು ಅಧಿಕಾರಿಗಳು ನಿಗದಿ ಮಾಡಿದ್ದಾರೆ. ಈವರೆಗೂ ಇರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಇದು ಅತ್ಯಂತ ನಿಧಾನವಾದ ರೈಲು ಎನಿಸಿದೆ.
ಅಪಘಾತದ ನಂತರ ಹಾನಿಯನ್ನು ಪರಿಶೀಲಿಸಲು ರೈಲನ್ನು ಕೆಲವು ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ಆ ಬಳಿಕ ರೈಲು ಚೆನ್ನೈ ಕಡೆ ತನ್ನ ಪ್ರಯಾಣವನ್ನು ಆರಂಭ ಮಾಡಿತು. ಕಳೆದ ಅಕ್ಟೋಬರ್‌ನಿಂದ ವಮದೇ ಭಾರತ್ ರೈಲಿಗೆ ಆದ ಐದನೇ ಅಪಘಾತ ಇದಾಗಿದೆ. ವರದಿಗಳ ಪ್ರಕಾರ ಅಂದಾಜು 2 ನಿಮಿಷಗಳ ಕಾಲ ರೈಲು ನಿಂತಿತ್ತು ಎನ್ನಲಾಗಿದೆ. ಈ ಹಿಂದೆ ಉತ್ತರ ಭಾರತದ ವಿವಿದೆಢೆ ಸಂಚಾರ ಮಾಡುವಾಗ ವಂದೇ ಭಾರತ್ ರೈಲಿಗೆ ಹಸು, ಎಮ್ಮೆ, ಎತ್ತು ಡಿಕ್ಕಿ ಹೊಡೆದ ಘಟನೆಗಳು ವರದಿಯಾಗಿದ್ದವು. ಭವಿಷ್ಯದಲ್ಲಿ ಇಂಥ ಅಹಿತಕರ ಘಟನೆಗಳನ್ನು ತಪ್ಪಿಸಲು ಇಲಾಖೆಯು ಕರುವಿನ ಮಾಲೀಕರನ್ನು ಪತ್ತೆಹಚ್ಚಿ, ಪ್ರಕರಣವನ್ನು ದಾಖಲಿಸಿ ಭಾರಿ ದಂಡವನ್ನು ವಿಧಿಸುತ್ತದೆ ಎಂದು ದಕ್ಷಿಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪ್ರಕಟಣೆ ತಿಳಿಸಿದೆ.
Vande Bharat Express ಬಡಿದು 54 ವರ್ಷದ ಮಹಿಳೆ ಸಾವು!
ರೈಲ್ವೆ ಕಾಯಿದೆ 1989 ರ ನಿಬಂಧನೆಗಳ ಪ್ರಕಾರ, ಜಾನುವಾರುಗಳ ಮಾಲೀಕರು ಸೆಕ್ಷನ್ 154 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ (ಉದ್ದೇಶಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು, ಒಂದು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು).
ಗೂಳಿಗೆ ಗುದ್ದಿ ಮತ್ತೆ ನುಜ್ಜುಗುಜ್ಜಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು..!
ಜಾನುವಾರು ಡಿಕ್ಕಿ ತಡೆಗೆ ಹಳಿ ಪಕ್ಕ 1000 ಕಿ.ಮೀ ಉದ್ದದ ತಡೆಗೋಡೆ!: ರೈಲುಗಳಿಗೆ ಜಾನುವಾರುಗಳ ಡಿಕ್ಕಿ ತಪ್ಪಿಸಲು ಹಳಿಗಳ ಪಕ್ಕ 1000 ಕಿ.ಮಿ ಉದ್ದದ ತಡೆಗೋಡೆ ನಿರ್ಮಾಣ ಮಾಡಲಾಗುವುದು ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ರೈಲುಗಳಿಗೆ ಜಾನುವಾರುಗಳು ಡಿಕ್ಕಿ ಹೊಡೆದ ಪ್ರಕರಣ ಹೆಚ್ಚಿರುವ ಕಡೆ 6 ತಿಂಗಳಲ್ಲಿ ಗೋಡೆ ನಿರ್ಮಿಸಲಾಗುವುದು ಎಂದಿದ್ದಾರೆ. ಇದೇ ವರ್ಷದಲ್ಲಿ 4000 ರೈಲುಗಳಿಗೆ ಜಾನುವಾರು ಡಿಕ್ಕಿ ಹೊಡೆದ ಘಟನೆಗಳು ನಡೆದಿದ್ದು ಅಕ್ಟೋಬರ್ ತಿಂಗಳ ಮೊದಲ 9 ದಿನದಲ್ಲೇ ಇಂಥ 200 ಘಟನೆ ನಡೆದಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಎಮ್ಮೆಗಳು ಡಿಕ್ಕಿ ಹೊಡೆದಿದ್ದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯುಂಟಾಗಿತ್ತು.
ಜಾನುವಾರುಗಳು ಮಾತ್ರವಲ್ಲ ವಂದೇ ಭಾರತ್ ಡಿಕ್ಕಿ ಹೊಡೆದು ಗುಜರಾತ್‌ನಲ್ಲಿ ಮಹಿಳೆಯೊಬ್ಬಳು ಕೂಡ ಸಾವು ಕಂಡಿದ್ದರು. ನವೆಂಬರ್ 8 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಬರುವಾಗ ರೈಲ್ವೇ ಟ್ರ್ಯಾಕ್ ದಾಟಲು ಯತ್ನಿಸಿದ 54 ವರ್ಷದ ಮಹಿಳೆಯ ಮೇಲೆ ರೈಲು ಹರಿದಿತ್ತು. ಗುಜರಾತ್‌ನ ಆನಂದ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಮಹಿಳೆ ರೈಲ್ವೇ ಹಳಿಯನ್ನು ದಾಟುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ವಂದೇ ಭಾರತ್ ರೈಲು ಅನಾವರಣವಾದ ದಿನದಿಂದಲೂ ಇಂಥದ್ದೇ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ರೈಲ್ವೇ ಹಳಿ ದಾಟುವಾಗ ಮಹಿಳೆಯೊಬ್ಬರು ಸಾವನ್ನಪ್ಪಿರುವುದು ರೈಲ್ವೆ ಹಳಿಗಳ ಅಕ್ಕ ಪಕ್ಕದಲ್ಲಿ ಬದುಕುವ ಜನರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
