ನವದೆಹಲಿ(ಜೂ.30): ಪೂರ್ವ ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವೆ 45 ವರ್ಷಗಳಲ್ಲೇ ಮೊದಲ ಬಾರಿ ಭೀಕರ ಹಿಂಸಾಚಾರ ನಡೆದು 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಘರ್ಷಣೆ ಆರಂಭವಾಗಿದ್ದು ಹೇಗೆಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಸೇನಾಪಡೆಯ ಮಾಜಿ ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವ ಜ| ವಿ.ಕೆ.ಸಿಂಗ್‌ ಈ ಕುರಿತು ಮಾಹಿತಿ ನೀಡಿದ್ದು, ‘ಜೂ.15ರಂದು ನೈಜ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯಲ್ಲಿ ಚೀನಾ ಸೈನಿಕರ ಟೆಂಟ್‌ನಲ್ಲಿ ನಿಗೂಢವಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಘರ್ಷಣೆ ಆರಂಭವಾಯಿತು’ ಎಂದು ಹೇಳಿದ್ದಾರೆ.

4 ರಾಷ್ಟ್ರಗಳಿಂದ ಭಾರತಕ್ಕೆ ಶಸ್ತ್ರಾಸ್ತ್ರ: ಚೀನಾಕ್ಕೀಗ ನಡುಕ!

‘ಎಲ್‌ಎಸಿಯಿಂದ ಎರಡೂ ಕಡೆಯವರು ಹಿಂದೆ ಸರಿಯಬೇಕು ಎಂದು ಮೊದಲೇ ನಿರ್ಧಾರವಾಗಿತ್ತು. ಘರ್ಷಣೆ ನಡೆದ ದಿನ ಭಾರತದ ಯೋಧರು ಚೀನಾದ ಸೇನೆ ವಾಪಸ್‌ ಹೋಗಿದೆಯೇ ಎಂದು ಪರಿಶೀಲಿಸಲು ಅಲ್ಲಿಗೆ ಹೋಗಿದ್ದರು. ಆಗ ಚೀನಾದ ಪಡೆಗಳು ಇನ್ನೂ ಅಲ್ಲೇ ಇರುವುದು ಕಾಣಿಸಿತು. ಅಷ್ಟೇ ಅಲ್ಲ, ಚೀನಾದವರು ಅಲ್ಲಿ ಟೆಂಟ್‌ ಕೂಡ ನಿರ್ಮಿಸಿದ್ದರು. ಆಗ ಭಾರತದ ಕಮಾಂಡಿಂಗ್‌ ಆಫೀಸರ್‌ ಆ ಟೆಂಟ್‌ ತೆರವುಗೊಳಿಸುವಂತೆ ಸೂಚಿಸಲು ಹೋದರು. ಚೀನಾ ಯೋಧರು ಟೆಂಟ್‌ ತೆಗೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಆಗ ಉಭಯ ಪಡೆಗಳ ನಡುವೆ ಹಿಂಸಾಚಾರ ಆರಂಭವಾಯಿತು’ ಎಂದು ಸಿಂಗ್‌ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಚೀನಾದ ಬಿಡಿಭಾಗ ಆಮದು ಸಮಸ್ಯೆ; ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ ವಿಳಂಬ!

ಅಂದಿನ ಘರ್ಷಣೆಯಲ್ಲಿ 40ಕ್ಕೂ ಹೆಚ್ಚು ಚೀನಾ ಸೈನಿಕರು ಸಾವನ್ನಪ್ಪಿದ್ದಾರೆ ಎಂದೂ ವಿ.ಕೆ.ಸಿಂಗ್‌ ಪುನರುಚ್ಚರಿಸಿದ್ದಾರೆ. ಚೀನಾ ಇನ್ನೂ ಇದನ್ನು ಒಪ್ಪಿಕೊಂಡಿಲ್ಲ.