ಝಲ್ದಾ (ಮಾ.16): ಈ ಬಾರಿಯ ರಾಜ್ಯ ವಿಧಾ​ನ​ಸಭೆ ಚುನಾ​ವಣೆ ವೇಳೆ ತಮ್ಮ ವಿರುದ್ಧ ನಡೆ​ಯುವ ಯಾವುದೇ ಷಡ್ಯಂತ್ರ​ಗಳು ಬಿಜೆಪಿ ವಿರು​ದ್ಧದ ತಮ್ಮ ಹೋರಾಟ ಮತ್ತು ಪ್ರಚಾ​ರಕ್ಕೆ ಅಡ್ಡಿ​ಪ​ಡಿ​ಸ​ಲಾ​ರವು ಎಂದು ತೃಣಮೂಲ ಕಾಂಗ್ರೆಸ್‌ ಅಧಿನಾಯಕಿ, ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಗುಡು​ಗಿ​ದರು.

ನಂದಿ​ಗ್ರಾ​ಮ​ದಲ್ಲಿ ಗಾಯ​ವಾದ ಕಾಲಿಗೆ ಚಿಕಿತ್ಸೆ ಪಡೆದ ಬಳಿಕ ಸೋಮ​ವಾರ ಭಾಗಿ​ಯಾದ ತಮ್ಮ ಮೊದಲ ಚುನಾ​ವಣಾ ರಾರ‍ಯಲಿ​ಯ​ನ್ನು​ದ್ದೇ​ಶಿಸಿ ದೀದಿ, ‘ನನ್ನ ಕಾಲು ಶೀಘ್ರ ಸರಿಯಾಗುತ್ತೆ. ಕೆಲ ದಿನಗಳಲ್ಲಿ ನಾನು ಓಡಾಡುವೆ. ಆದರೆ. ಬಂಗಾ​ಳದ ಮಣ್ಣಿ​ನಲ್ಲಿ ನಿಮ್ಮ ಕಾಲು ಅದು ಹೇಗೆ ಓಡಾ​ಡ​ಲಿವೆ ಎಂದು ನೋಡು​ತ್ತೇನೆ’ ಎಂದು ಬಿಜೆ​ಪಿಗೆ ಟಾಂಗ್‌ ನೀಡಿ​ದರು.

ಇನ್ನು, ‘ರಥಗಳಲ್ಲಿ ಓಡಾಡುವವ ಪುರಿ ಜಗನ್ನಾಥ. ಆದರೆ ಈಗ ರಥದಲ್ಲಿ ಓಡಾಡುವವರೆಲ್ಲ ದೇವರೇ?’ ಎಂದು ಬಿಜೆಪಿ ರಥಯಾತ್ರೆಯನ್ನು ಗೇಲಿ ಮಾಡಿದರು.

ದಿಲ್ಲಿಯ ಹಲವು ನಾಯ​ಕ​ರೊಂದಿಗೆ ಬಂಗಾ​ಳ​ವನ್ನು ಗೆಲ್ಲಲು ಬಿಜೆಪಿ ಮುಂದಾ​ಗಿದೆ. ಆದರೆ ಕಳೆದ 10 ವರ್ಷ​ಗ​ಳಲ್ಲಿ ರಾಜ್ಯ​ದಲ್ಲಿ ಸಾಮಾ​ಜಿಕ ಕಲ್ಯಾಣ ಸೇರಿ​ದಂತೆ ಹಲವು ಅಭಿ​ವೃದ್ಧಿ ಯೋಜ​ನೆ​ಗ​ಳನ್ನು ಕೈಗೊಂಡಿ​ದ್ದೇನೆ. ನಾವು ಮಾಡಿ​ದಷ್ಟುಅಭಿ​ವೃದ್ಧಿ ಕೆಲ​ಸ​ವನ್ನು ವಿಶ್ವದ ಯಾವುದೇ ಸರ್ಕಾ​ರ​ಗಳು ಮಾಡ​ಲಾ​ಗದು. ಹೀಗಾಗಿ ಬಂಗಾಳ ನಿಮಗೆ ದಕ್ಕದು. ಅಲ್ಲದೆ ದೇಶ​ವನ್ನು ಮುನ್ನ​ಡೆ​ಸ​ಲಾ​ಗದ ಪ್ರಧಾನಿ ಅವರು ಪೂರ್ತಿ ಅಸ​ಮ​ರ್ಥರು ಎಂಬುದು ಖಚಿ​ತ​ವಾ​ಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆ​ಸಿ​ದರು. ಜೊತೆಗೆ ತಮ್ಮ ಧ್ವನಿ ಮತ್ತು ಹೃದಯ ಜೀವಂತ ಇರು​ವ​ವ​ರೆಗೆ ತಮ್ಮ ಹೋರಾ​ಟ​ವನ್ನು ಮುಂದು​ವ​ರಿ​ಸು​ತ್ತೇನೆ ಎಂದರು.