ವಯೋಮಿತಿ ಏರಿಕೆ ಭೀತಿ: ತುರ್ತು ಮದುವೆಗೆ ಮುಗಿಬಿದ್ದ ಮುಸ್ಲಿಮರು!
* ತೆಲಂಗಾಣದಾದ್ಯಂತ ನಿತ್ಯ ಭಾರೀ ಪ್ರಮಾಣದಲ್ಲಿ ವಿವಾಹ
* ವಯೋಮಿತಿ ಏರಿಕೆ ಭೀತಿ: ತುರ್ತು ಮದುವೆಗೆ ಮುಗಿಬಿದ್ದ ಮುಸ್ಲಿಮರು
ಹೈದರಾಬಾದ್(ಜ.07): ಕೇಂದ್ರ ಸರ್ಕಾರ ಮಹಿಳೆಯರ ವಿವಾಹದ ಕಾನೂನುಬದ್ಧ ವಯೋಮಿತಿ 18 ರಿಂದ 21 ವರ್ಷಕ್ಕೆ ಏರಿಕೆ ಮಾಡಲು ಪ್ರಸ್ತಾಪ ಮಾಡಿದ ಬೆನ್ನಲ್ಲೇ ಹೈದ್ರಾಬಾದ್ ಸೇರಿದಂತೆ ತೆಲಂಗಾಣದಾದ್ಯಂತ ಮುಸ್ಲಿಂ ಸಮುದಾಯ ತಮ್ಮ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಮುಗಿಬಿದ್ದಿವೆ.
ಕಳೆದ ತಿಂಗಳು ಸಂಸತ್ತಿನಲ್ಲಿ ಬಾಲ್ಯ ವಿವಾಹ ತಿದ್ದುಪಡಿ ಕಾಯ್ದೆ 2021ನ್ನು ಮಂಡಿಸಲಾಗಿತ್ತು. ವಿರೋಧಪಕ್ಷಗಳು ಆಕ್ಷೇಪಿಸಿದ ಕಾರಣ ಈ ಮಸೂದೆಯನ್ನು ಆಯ್ಕೆ ಸಮಿತಿಗೆ ರವಾನಿಸಲಾದರೂ ಮುಂಬರುವ ಅಧಿವೇಶನದಲ್ಲಿ ಇದಕ್ಕೆ ಒಪ್ಪಿಗೆ ಸಿಗಲಿದೆ ಎನ್ನುವ ಭೀತಿಯಿಂದ ಮುಂದಿನ ವರ್ಷ ನಿಗದಿಯಾದ ವಿವಾಹವನ್ನು ಕೂಡಲೇ ಮಾಡಲು ಪಾಲಕರು ಮುಂದಾಗುತ್ತಿದ್ದಾರೆ. ವಿವಾಹದ ಋುತುವಿನಲ್ಲೂ ದಿನಕ್ಕೆ 3ರಿಂದ 4 ವಿವಾಹಗಳು ಜರುಗುತ್ತಿದ್ದವು. ಆದರೆ ಹಲವಾರು ಖಾಜಿಗಳು ದಿನಕ್ಕೆ 10 ರಿಂದ 20 ವಿವಾಹಗಳನ್ನು ಮಾಡಿಸುತ್ತಿದ್ದಾರೆ. ವಧುವಿನ ಪಾಲಕರು ವರನ ಮನೆಯವರೊಂದಿಗೆ ಸೇರಿ ಕೇವಲ ಕಾನೂನಾತ್ಮಕ ವಿವಾಹದ ಪ್ರಕ್ರಿಯೆ ಮುಗಿಸಿಕೊಳ್ಳುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ಆಚರಣೆಗಳನ್ನು ಪೂರ್ವ ನಿಗದಿತ ಸಮಯದಲ್ಲೇ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
‘ಹೈದರಾಬಾದ್ ಮುಸ್ಲಿಂ ಸಮುದಾಯದಲ್ಲಿ ಶೇ.90 ಹೆಣ್ಣುಮಕ್ಕಳ ವಿವಾಹ 18-20 ರ ಒಳಗಡೆ ನಡೆಯುತ್ತದೆ. ಕೇವಲ ಶೇ.10 ಪಾಲಕರು ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಮುಂದಾಗುತ್ತಾರೆ. ವಿವಾಹದ ಮಿತಿ ಏರಿಕೆಯಾದರೆ ನಿಗದಿಯಾದ ವಿವಾಹಗಳು ಇನ್ನೂ ಮೂರು ವರ್ಷ ಮುಂದೂಡಿಕೆಯಾಗಬಹುದು. ಅಲ್ಲದೇ ಏನಾದರೂ ಸಮಸ್ಯೆಯಿಂದ ವಿವಾಹ ಸಂಬಂಧ ತಪ್ಪಿಹೋಗಬಹುದು ಎಂದು ಪಾಲಕರು ಚಿಂತೆಗೊಳಗಾಗಿ ತರಾತುರಿಯಲ್ಲಿ ವಿವಾಹ ಮಾಡುತ್ತಿದ್ದಾರೆ. ಸಂಸತ್ತಿನಲ್ಲಿ ಕಾಯ್ದೆ ಒಪ್ಪಿಗೆ ಪಡೆದು ಜಾರಿಗೆ ಬರಲು ಇನ್ನೆರಡು ವರ್ಷ ಬೇಕಾಗಬಹುದು, ಹೀಗಾಗಿ ತರಾತುರಿಯಲ್ಲಿ ವಿವಾಹದ ತಪ್ಪು ನಿರ್ಣಯ ತೆಗೆದುಕೊಳ್ಳಬೇಡಿ’ ಎಂದು ತೆಲಂಗಾಣ ವಕ್ಫ್ಬೋರ್ಡಿನ ಮುಖ್ಯಸ್ಥ ಪಾಲಕರಿಗೆ ಸಲಹೆ ನೀಡಿದ್ದಾರೆ.