ಶ್ರೀನಾಥ್ ದೋಸೆ ಕಾರ್ನರ್ ಎಂದು ಹೆಸರಿಟ್ಟ ಮುಸ್ಲಿಂ ವ್ಯಕ್ತಿಗೆ ಬೆದರಿಕೆ!
* ಮುಸ್ಲಿಂ ವ್ಯಕ್ತಿಯೊಬ್ಬ ತಾನು ನಡೆಸುತ್ತಿದ್ದ ದೋಸೆ ಅಂಗಡಿಗೆ ಹಿಂದೂ ದೇವರ ಹೆಸರು
* ಶ್ರೀನಾಥ್ ದೋಸೆ ಕಾರ್ನರ್ ಎಂದು ಹೆಸರಿಟ್ಟಮುಸ್ಲಿಂ ವ್ಯಕ್ತಿಗೆ ಮಥುರಾದಲ್ಲಿ ಬೆದರಿಕೆ
ಮಥುರಾ(ಆ.30): ಮುಸ್ಲಿಂ ವ್ಯಕ್ತಿಯೊಬ್ಬ ತಾನು ನಡೆಸುತ್ತಿದ್ದ ದೋಸೆ ಅಂಗಡಿಗೆ ಹಿಂದೂ ದೇವರ ಹೆಸರನ್ನು ಇಟ್ಟಿದ್ದ ಕಾರಣಕ್ಕೆ ಜನರ ಗುಂಪೊಂದು ಬೆದರಿಕೆ ಹಾಕಿದ್ದು, ಅಂಗಡಿಯನ್ನು ಹಾನಿಗೊಳಿಸಿರುವ ಘಟನೆ ಮಥರಾದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಗುಂಪಿನ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ವಿಕಾಸ್ ಬಜಾರ್ ಪ್ರದೇಶದಲ್ಲಿ ಆ.18ರಂದು ಈ ಘಟನೆ ನಡೆದಿದ್ದು, ‘ಶ್ರೀನಾಥ್ ದೋಸಾ ಕಾರ್ನರ್’ ಎಂದು ಬೋರ್ಡ್ ಹಾಕಿ ದೋಸೆ ಮಾರಾಟ ಮಾಡುತ್ತಿದ್ದ ಇರ್ಫಾನ್ ಎಂಬಾತನ ಮೇಲೆ ಜನರ ಗುಂಪು ಹಲ್ಲೆಗೆ ಯತ್ನಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ ಘಟನೆಯ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶ್ರೀನಾಥ್ ದೋಸಾ ಕಾರ್ನರ್ ಎಂದು ಬೋರ್ಡ್ ಇದ್ದ ತನ್ನ ಅಂಡಿಯ ಮುಂದೆ ಇರ್ಫಾನ್ ಕಣ್ಣೀರಿಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಹಿಂದೂ ವ್ಯಕ್ತಿಗಳು ಕೂಡ ತಪ್ಪು ಭಾವಿಸಿಕೊಂಡು ಈತನಿಂದ ತಿಂಡಿಯನ್ನು ತಿನ್ನುತ್ತಿದ್ದರು ಎಂದು ವ್ಯಕ್ತಿಯೊಬ್ಬ ಆರೋಪಿಸಿದ್ದಾನೆ.
ಇನ್ನೊಬ್ಬ ವ್ಯಕ್ತಿ ದೋಸೆ ಕಾರ್ನರ್‌ಗೆ ಆತ ಮುಸ್ಲಿಂ ಹೆಸರನ್ನು ಬಿಟ್ಟು ಹಿಂದೂ ಹೆಸರನ್ನು ಇಟ್ಟಿದ್ದೇಕೆ ಎಂದು ಪ್ರಶ್ನಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೇ ಕೃಷ್ಣನ ಭಕ್ತರು ಮಥುರಾವನ್ನು ಶುದ್ಧಗೊಳಿಸಬೇಕು ಎಂದು ಜನರ ಗುಂಪು ಘೋಷಣೆಯನ್ನು ಕೂಗಿದೆ.