Asianet Suvarna News Asianet Suvarna News

ಟ್ರಾಫಿಕ್‌ನಲ್ಲಿ ಸಿಲುಕಿದವರಿಗೆ ಸಂಗೀತಾ ರಸದೌತಣ ನೀಡಿದ ಆಟೋ ಚಾಲಕ: ವೈರಲ್ ವೀಡಿಯೋ

ಬೋರಿಂಗ್ ಟ್ರಾಫಿಕ್ ಬಹುತೇಕರ ತಾಳ್ಮೆ ಕೆಡುವಂತೆ ಮಾಡುತ್ತದೆ. ಹೀಗಿರುವಾಗ ಆಟೋ ಚಾಲಕರೊಬ್ಬರು ಈ ಕ್ಷಣವನ್ನು ಚೆನ್ನಾಗಿ ಬಳಸಿಕೊಂಡಿದ್ದು, ಜನದಟ್ಟಣೆಯ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಜನರಿಗೆ ಸಂಗೀತಾದ ರಸದೌತಣ ನೀಡಿದ್ದಾರೆ.

Music concert by an Mumbai auto driver who stuck in traffic video goes viral akb
Author
First Published Nov 2, 2023, 4:15 PM IST

ಮುಂಬೈ: ಮಹಾನಗರಿಗಳಲ್ಲಿ ವಾಸಿಸುವ ಜನ ಅತೀ ಹೆಚ್ಚು ದ್ವೇಷಿಸುವ ಒಂದೇ ಒಂದು ವಿಚಾರವೆಂದರೆ ಅದು ಟ್ರಾಫಿಕ್ ದಟ್ಟಣೆ. ಮಹಾನಗರದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಪ್ರಯಾಣಿಸುವವರು ಬಹುತೇಕ ಟ್ರಾಫಿಕ್‌ನಲ್ಲಿಯೇ ತಮ್ಮ ಜೀವನದ ಅಮೂಲ್ಯ ಸಮಯವನ್ನು ವ್ಯಯ ಮಾಡಬೇಕಾಗುತ್ತದೆ. ಇಂತಹ ಬೋರಿಂಗ್ ಟ್ರಾಫಿಕ್ ಬಹುತೇಕರ ತಾಳ್ಮೆ ಕೆಡುವಂತೆ ಮಾಡುತ್ತದೆ. ಹೀಗಿರುವಾಗ ಆಟೋ ಚಾಲಕರೊಬ್ಬರು ಈ ಕ್ಷಣವನ್ನು ಚೆನ್ನಾಗಿ ಬಳಸಿಕೊಂಡಿದ್ದು, ಜನದಟ್ಟಣೆಯ ಟ್ರಾಫಿಕ್‌ನಲ್ಲಿ ಸಿಲುಕಿದ್ದ ಜನರಿಗೆ ಸಂಗೀತಾದ ರಸದೌತಣ ನೀಡಿದ್ದಾರೆ. ಆಟೋ ಚಾಲಕನ ಈ ವೀಟಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಈ ವಿಡಿಯೋವನ್ನು ಸಮಯ್ ರೈನಾ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅಂಧೇರಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದೇನೆ ಎಂದು ನನಗೆ ಅನಿಸಲೇ ಇಲ್ಲ.. ಎಂತಹ ಸುಂದರ ವ್ಯಕ್ತಿ. ಕೊನೆವರೆಗೂ ವೀಕ್ಷಿಸಿ ಎಂದು ಬರೆದು 45 ಸೆಕೆಂಡ್‌ಗಳ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. 70 ಸಾವಿರಕ್ಕೂ ಹೆಚ್ಚು ಜನ ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಮಹಾನಗರಿ ಮುಂಬೈನ ಅಂಧೇರಿ  ಪ್ರದೇಶದ ವೀಡಿಯೋ ಇದಾಗಿದೆ. 

ವೀಡಿಯೋದಲ್ಲಿ ಆಟೋ ಚಾಲಕ ರಸ್ತೆಯಲ್ಲಿ ಟ್ರಾಫಿಕ್‌ನಲ್ಲಿ ತನ್ನ ಆಟೋದೊಂದಿಗೆ ಸಿಲುಕಿದ್ದು, ಈ ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯದೇ ಟ್ರಾಫಿಕ್‌ನಲ್ಲಿ ಸಿಲುಕಿದವರಿಗೆ ಮನೋರಂಜನೆ ನೀಡಲು ಮುಂದಾಗಿದ್ದಾರೆ. ಇದಕ್ಕೆ ತಕ್ಕಂತೆ ಇವರ ಆಟೋದಲ್ಲಿ ಸಂಗೀತಾ ಪರಿಕರಗಳಿದ್ದು, ಮೈಕ್ ಹಾಗೂ ಸೌಂಡ್ ಬಾಕ್ಸ್ ಕೂಡ ಇದೇ. ಟ್ರಾಫಿಕ್ ನಿಲ್ಲುತ್ತಿದ್ದಂತೆ ಇವರು ಹಾಡಲು ಶುರು ಮಾಡಿದ್ದು, ಇವರ ಸುಮಧುರ ಕಂಠಕ್ಕೆ ಟ್ರಾಫಿಕ್ ಸ್ತಬ್ಧವಾಗಿದೆ.  ಈ ದೃಶ್ಯವನ್ನು ಆಟೋದ ಪಕ್ಕದಲ್ಲೇ ಇದ್ದ ಕಾರು ಚಾಲಕರೊಬ್ಬರು ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ಆಟೋ ಚಾಲಕನನ್ನು ಮಾತನಾಡಿಸಿ ಧನ್ಯವಾದ ಹೇಳಿದ್ದಾರೆ. ಅಂದಹಾಗೆ ಹೀಗೆ ಟ್ರಾಫಿಕ್‌ನ ಬೊರಿಂಗ್ ಕ್ಷಣಗಳನ್ನು ಸುಮಧುರವಾಗಿಸಿದ ಆಟೋ ಚಾಲಕನ ಹೆಸರು ಸತ್ಯವಾನ್‌.

ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಧನ್ಯವಾದ ತಿಳಿಸಿದ್ದಾರೆ.  ಅಲ್ಲದೇ ಅನೇಕರು ಕಾಮೆಂಟ್‌ಗಳ ಮೂಲಕವೂ ಧನ್ಯವಾದ ತಿಳಿಸಿದ್ದಾರೆ.  

 

Follow Us:
Download App:
  • android
  • ios