ಮುಂಬೈನ ಕಂಜೂರ್ ಮಾರ್ಗ್ ಪ್ರದೇಶದಲ್ಲಿರುವ ಗಗನಚುಂಬಿ ಜನವಸತಿ ಕಟ್ಟಡವೊಂದರಲ್ಲಿ ವಾಸವಿರುವ ಮಹಿಳೆಯೊಬ್ಬರು ಮನೆಯ ಕಿಟಕಿಯನ್ನು ಸ್ವಚ್ಛಗೊಳಿಸಲು ಬಹಳ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ.
ಮುಂಬೈ: ಕೆಲವು ಮಹಿಳೆಯರು ಮನೆಯನ್ನು ಚೆಂದಗಾಣಿಸಲು ಎಂಥಹಾ ಸಾಹಸವನ್ನು ಬೇಕಾದರೂ ಮಾಡುತ್ತಾರೆ ಅದಕ್ಕೆ ಒಂದು ಉತ್ತಮ ನಿದರ್ಶನ ಇಲ್ಲಿರುವ ವೀಡಿಯೋ. ಮುಂಬೈನ ಕಂಜೂರ್ ಮಾರ್ಗ್ ಪ್ರದೇಶದಲ್ಲಿರುವ ಗಗನಚುಂಬಿ ಜನವಸತಿ ಕಟ್ಟಡವೊಂದರಲ್ಲಿ ವಾಸವಿರುವ ಮಹಿಳೆಯೊಬ್ಬರು ಮನೆಯ ಕಿಟಕಿಯನ್ನು ಸ್ವಚ್ಛಗೊಳಿಸಲು ಬಹಳ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. 16ನೇ ಮಹಡಿಯಲ್ಲಿ ವಾಸವಿರುವ ಅವರು ಕಟ್ಟಡದ ಅಂಚಿನಲ್ಲಿರುವ ಕಿಟಕಿ ಏರಿ ಕಿಟಕಿಯನ್ನು ಸ್ವಚ್ಛ ಮಾಡಿದ್ದಾರೆ. ಇದನ್ನು ಮತ್ತೊಂದು ಕಟ್ಟಡದಲ್ಲಿದ್ದವರಾರೋ ವಿಡಿಯೋ ಮಾಡಿ ಹಾಕಿದ್ದು, ವೀಡಿಯೋ ನೋಡಿದ ಅನೇಕರು ಮಹಿಳೆಯ ಈ ಅಪಾಯಕಾರಿ ನಡೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಕಂಜೂರ್‌ಮಾರ್ಗದ ರುನ್ವಾಲ್ ಬ್ಲೀಸ್ ಹೆಸರಿನ ಜನವಸತಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಇದೊಂದು ಫ್ಲಾಟ್ ಆಗಿದ್ದು, ಮಹಿಳೆ ನೀರಿನ ಬಕೆಟ್ ಹಾಗೂ ಕಿಟಕಿ ಸ್ವಚ್ಛ ಮಾಡಲು ಬಟ್ಟೆಯೊಂದನ್ನು ಹಿಡಿದು ಬಾಲ್ಕನಿಯ ಅಂಚಿನಲ್ಲಿ ನಿಂತು ಕಿಟಿಕಿ ಸ್ವಚ್ಛ ಮಾಡುವುದನ್ನು ಕಾಣಬಹುದಾಗಿದೆ. ಕಿಟಕಿಯಿಂದ ಸೀದಾ ಕೆಳಗೆ ನೋಡಿದರೆ ಪ್ರತಾಪದಷ್ಟು ಆಳವಿದ್ದು, ತಲೆ ಚಕ್ಕರ್ ಹೊಡೆಯುವುದಂತೂ ಗ್ಯಾರಂಟಿ, ಹಾಗಿದ್ದು, ಈ ಮಹಿಳೆ ಕ್ಯಾರೇ ಅನ್ನದೇ ಕಿಟಕಿ ಸ್ವಚ್ಛತೆಗೆ ಹೀಗೆ ಜೀವ ಭಯವಿಲ್ಲದೇ ಕಿಟಕಿ ಏರಿದ್ದು ನೋಡಿ ಅನೇಕರು ಅಚ್ಚರಿ ಪಟ್ಟಿದ್ದಾರೆ.
ಹೈದರಾಬಾದ್‌ನಲ್ಲಿ ತಲೆ ಎತ್ತಿದ 50 ಮಹಡಿಗಳ ಅವಳಿ ಗಗನಚುಂಬಿ ಕಟ್ಟಡ
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಇದೆಷ್ಟು ಅಪಾಯಕಾರಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈಕೆ ಮನೆಕೆಲಸದಾಕೆಯಾಗಿರಬೇಕು. ಬಹುಶಃ ಮನೆ ಮಾಲೀಕ ಆಕೆಯನ್ನು ಕಿಟಕಿಯನ್ನು ಮನೆಯ ಹೊರಭಾಗದಿಂದ ಸ್ವಚ್ಛಗೊಳಿಸುವಂತೆ ಒತ್ತಾಯಿಸಿರಬೇಕು ಹೀಗಾಗಿ ಆಕೆ ರಿಸ್ಕ್ ತೆಗೆದುಕೊಂಡು ಈ ಕೆಲಸ ಮಾಡುತ್ತಿರಬಹುದು ಎಂದು ಊಹೆ ಮಾಡಿದ್ದಾರೆ. ಮತ್ತೆ ಕೆಲವರು ಇದೊಂದು ಮೂರ್ಖತನದ ಕೆಲಸ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಬಹುಶಃ ಆಕೆ ಸ್ಟಂಟ್‌ಮ್ಯಾನ್ ಕುಟುಂಬದಿಂದಲೂ ಸ್ಪೈಡರ್‌ಮ್ಯಾನ್ ಕುಟುಂಬದಿಂದಲೂ ಬಂದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಮಥುರಾದಲ್ಲಿ 668 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ 70 ಅಂತಸ್ತಿನ ಗಗನಚುಂಬಿ ಶ್ರೀಕೃಷ್ಣ ದೇಗುಲ
ಯಾಕೆ ಕೆಲವರು ಸ್ಚಚ್ಛತೆಯ ಬಗ್ಗೆ ಇಷ್ಟು ಹುಚ್ಚರಾಗಿದ್ದಾರೆ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಈ ರೀತಿ ಜೀವಕ್ಕೆ ಅಪಾಯ ತಂದುಕೊಳ್ಳುವ ಬದಲು ಕಿಟಕಿಯನ್ನು ಸುಲಭವಾಗಿ ಸ್ವಚ್ಛ ಮಾಡಲು ಮಾರುಕಟ್ಟೆಯಲ್ಲಿ ಬೇರೆ ಉತ್ಪನ್ನಗಳಿವೆ, ಮ್ಯಾಗ್ನೇಟಿಕ್ ವಿಂಡೋ ವೈಪರ್‌ಗಳಿದ್ದು, ಅವುಗಳ ಮೂಲಕ ನೀವು ಒಳಭಾಗದಿಂದಲೇ ಹೊರಭಾಗದ ಕಿಟಕಿಯನ್ನು ಕೂಡ ಸ್ವಚ್ಛಗೊಳಿಸಬಹುದು, ನಾವು ಕೋಟಿ ಮೊತ್ತದ ಫ್ಲಾಟ್ ತೆಗೆದುಕೊಳ್ಳುತ್ತೇವೆ, ಆದರೆ 500 ರೂ ವೆಚ್ಚ ಮಾಡುವ ಬದಲು ನಮ್ಮ ಜೀವವನ್ನೇ ಅಪಾಯಕೊಡ್ಡುತ್ತೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕೆಲ ಮನೆಗಳ ಹೆಣ್ಣು ಮಕ್ಕಳು ಮನೆಯನ್ನು ಸ್ವಚ್ಛವಾಗಿಡಲು, ಚೆಂದಗಾಣಿಸಲು ಎಂತಹಾ ಅಪಾಯವನ್ನು ಕೂಡ ಮೈಮೇಲೆ ಎಳೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆಯೊಂದು ನಿದರ್ಶನವಾಗಿದೆ.
