Mumbai judge bribery scandal: ಭೂ ವಿವಾದ ಪ್ರಕರಣವೊಂದರಲ್ಲಿ ಸರಿಯಾದ ತೀರ್ಪು ನೀಡಲು ದೂರುದಾರನ ಬಳಿ  ₹15 ಲಕ್ಷ ಲಂಚ ಪಡೆದ ಆರೋಪದ ಮೇಲೆ ನ್ಯಾಯಾಲಯದ ಕ್ಲಾರ್ಕ್‌ನನ್ನು ಎಸಿಬಿ ಬಂಧಿಸಿದೆ. ಈ ಪ್ರಕರಣದಲ್ಲಿ ನ್ಯಾಯಾಧೀಶರೇ ಪ್ರಮುಖ ಆರೋಪಿಯಾಗಿದ್ದು, ಪರಾರಿಯಾಗಿದ್ದಾರೆ.

ನ್ಯಾಯಾಧೀಶರ ವಿರುದ್ಧ ತನಿಖೆಗೆ ಹೈಕೋರ್ಟ್‌ ಅನುಮತಿ ಪಡೆಯಲು ಎಸಿಬಿ ಸಿದ್ಧತೆ:

ಗ್ರಾಮ ಪಂಚಾಯತ್‌ನಿಂದ ಹಿಡಿದು ಸಂಸದರವರೆಗೆ ಇಂದು ಎಲ್ಲೆಡೆ ಭ್ರಷ್ಟ್ರಾಚಾರ ತುಂಬಿ ತುಳುಕಿದೆ. ಇಲ್ಲಿಯವರೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲಾದರೂ ಜನರಿಗೆ ತುಸು ನಂಬಿಕೆ ಇತ್ತು. ಕನಿಷ್ಠ ನ್ಯಾಯಾಲಯವಾದರೂ ನಮಗೆ ನ್ಯಾಯ ನೀಡಬಹುದು ಎಂಬ ನಂಬಿಕೆ ಅನೇಕರದ್ದು. ಆದರೆ ಈಗ ನಡೆಯುವ ಕೆಲ ಘಟನೆಗಳನ್ನು ನೋಡಿದರೆ ನ್ಯಾಯಾಲಯದಲ್ಲೂ ನಿಮಗೆ ನ್ಯಾಯ ಸಿಗುವುದಿಲ್ಲ, ಹೌದು ಪ್ರಕರಣವೊಂದರಲ್ಲಿ ಸರಿಯಾದ ತೀರ್ಪು ನೀಡುವುದಕ್ಕೆ ಲಂಚ ಕೇಳಿದ ಆರೋಪದ ಮೇಲೆ ನ್ಯಾಯಾಲಯದ ಕ್ಲಾರ್ಕ್‌ ಓರ್ವನನ್ನು ಕಳೆದ ವಾರ ಎಸಿಬಿ ಬಂಧಿಸಿದೆ. ಈ ಪ್ರಕರಣದಲ್ಲಿ ಮುಂಬೈನ ಕೆಳ ಹಂತದ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಪ್ರಮುಖ ಆರೋಪಿಯಾಗಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದು, ಅವರ ವಿರುದ್ಧ ವಿಚಾರಣೆಗೆ ಈಗ ಬಾಂಬೆ ಹೈಕೋರ್ಟ್‌ ನ್ಯಾಯಾಧೀಶರ ಅನುಮತಿಗಾಗಿ ಎಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಸರಿಯಾದ ತೀರ್ಪು ನೀಡಲು ಲಂಚದ ಬೇಡಿಕೆ:

ಭೂ ವಿವಾದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬರ ಪರ ಅನುಕೂಲಕರ ತೀರ್ಪು ನೀಡುವ ಸಲುವಾಗಿ ₹15 ಲಕ್ಷ ಲಂಚ ಪಡೆದ ಆರೋಪದ ಮೇಲೆ ಸಿವಿಲ್ ನ್ಯಾಯಾಲಯದ ಗುಮಾಸ್ತ ಕಮ್ ಟೈಪಿಸ್ಟ್ ಚಂದ್ರಕಾಂತ್ ವಾಸುದೇವ್ ಎಂಬಾತನನ್ನು ಎಸಿಬಿ ಅಧಿಕಾರಿಗಳು ಕಳೆದ ವಾರ ರೆಡ್‌ಹ್ಯಾಂಡ್ ಆಗಿ ಲಂಚ ಸ್ವೀಕರಿಸುವ ವೇಳೆಯೇ ಬಂಧಿಸಿದ್ದರು. ಈ ಬಂಧನದ ವೇಳೆ ಈ ಪ್ರಕರಣದಲ್ಲಿ ನ್ಯಾಯಾಧೀಶರು ಕೂಡ ಪ್ರಮುಖವಾಗಿ ಭಾಗಿಯಾಗಿರುವುದು ಎಸಿಬಿ ಅಧಿಕಾರಿಗಳಿಗೆ ತಿಳಿದು ಬಂದಿದೆ. ಸಿಕ್ಕಿಬಿದ್ದ ಕ್ಲಾರ್ಕ್ ಹಾಗೂ ನ್ಯಾಯಾಧೀಶರ ನಡುವಿನ ಫೋನ್ ಸಂಭಾಷಣೆಯಿಂದಾಗಿ ನ್ಯಾಯಾಧೀಶರೇ ಈ ಪ್ರಕರಣದಲ್ಲಿ ಪ್ರಮುಖವಾಗಿ ಭಾಗಿಯಾಗಿರುವುದು ಸಾಬೀತಾಗಿದೆ. ಘಟನೆಯ ಬಳಿಕ ನ್ಯಾಯಾಧೀಶ ಏಜಾಜುದ್ದೀನ್ ಸಲಾವುದ್ದೀನ್ ಕಾಜಿ ನಾಪತ್ತೆಯಾಗಿದ್ದಾರೆ. ಇವರು ಮುಂಬೈನ ಮಜಗಾಂವ್‌ನ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿದ್ದಾರೆ.

ಮೂತ್ರ ವಿಸರ್ಜನೆಯ ನಡುವೆಯೇ ಶೌಚಾಲಯದಲ್ಲಿ ಲಂಚಕ್ಕೆ ಡೀಲ್

ಉದ್ಯಮಿ ಟೋನಿ(ಹೆಸರು ಬದಲಾಯಿಸಲಾಗಿದೆ) ಎಂಬುವವರು ತಮ್ಮ ಪತ್ನಿಗೆ ಸೇರಿದ ಭೂಮಿಯನ್ನು ಬೇರೆಯವರು ಆಕ್ರಮಿಸಿಕೊಂಡ ನಂತರ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕೇಸ್ ನನ್ಯಾಯಾಧೀಶ ಏಜಾಜುದ್ದೀನ್ ಸಲಾವುದ್ದೀನ್ ಕಾಜಿಯ ಪೀಠದ ಮುಂದೆ ಬಂದಿತ್ತು. ವಿಚಾರಣೆಯ ಮಧ್ಯೆ ಸಣ್ಣ ವಿರಾಮ ತೆಗೆದುಕೊಳ್ಳಲಾಗಿತ್ತು. ಈ ವೇಳೆ ಕಕ್ಷಿದಾರ ಟೋನಿ ಶೌಚಾಲಯಕ್ಕೆ ಹೋಗಿದ್ದಾರೆ. ಇದೇ ವೇಳೆ ಜಡ್ಜ್ ಕಾಜಿಯವರ ಕ್ಲಾರ್ಕ್ ಕೂಡ ಅವರ ಹಿಂದೆಯೇ ಹೋಗಿದ್ದಾರೆ. ಇಬ್ಬರು ಅಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆಯೇ ಈ ಕ್ಲಾರ್ಕ್ ಚಂದ್ರಕಾಂತ್ ವಾಸುದೇವ್, ಟೋನಿ ಬಳಿ ಸಾಮಾನ್ಯ ಎಂಬಂತೆ, 'ನೀವು ನ್ಯಾಯಾಧೀಶರ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೆ, ತೀರ್ಪು ನಿಮ್ಮ ಪರವಾಗಿ ಬರುತ್ತದೆ' ಎಂದು ಹೇಳಿದ್ದಾನೆ. ಆಗ ಟೋನಿ ಹಾಗಂದ್ರೆ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಕ್ಲಾರ್ಕ್ 25 ಲಕ್ಷ ರೂಪಾಯಿ ಎಂದು ಉತ್ತರಿಸಿದ್ದಾರೆ.ಇದಕ್ಕೆ ಟೋನಿ ನಿರಾಕರಿಸಿದ್ದಾರೆ. ಆ ದಿನ ಈ ಪ್ರಕರಣದ ವಿಚಾರಣೆ ಮುಂದೂಡಿಕೆಯಾಗಿದೆ.

ದೂರುದಾರನಿಗೆ ಮತ್ತೆ ಮತ್ತೆ ಕರೆ 25 ಲಕ್ಷದಿಂದ 15 ಲಕ್ಷಕ್ಕೆ ಚೌಕಾಸಿ

ಎರಡು ದಿನದ ನಂತರ ಟೋನಿಗೆ ಮತ್ತೆ ಕರೆ ಬಂದಿದೆ. ಯೋಚನೆ ಮಾಡಿ, ತೀರ್ಪು ನನ್ನ ಪರವಾಗಿ ಬರಲಿಲ್ಲ ಎಂದು ಮತ್ತೆ ಅಳಬೇಡಿ ಎಂದು ಆ ಕಡೆಯಿಂದ ಹೇಳಿದ್ದಾರೆ. ಟೋನಿ ಫೋನ್ ಕಟ್ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಿರದ ಕ್ಲಾರ್ಕ್ ಮತ್ತೆ ಕರೆ ಮಾಡಿದ್ದಾನೆ. ಚರ್ಚೆ ಮಾಡುತ್ತಾ 15 ಲಕ್ಷಕ್ಕೆ ವ್ಯವಹಾರ ಕುದುರಿಸಲು ನೋಡಿದ್ದಾನೆ. ಇವರ ಈ ಲಂಚಾವತಾರದಿಂದ ಬೇಸತ್ತ ಟೋನಿ ಸೀದಾ ಎಸಿಬಿಯ ಕದ ತಟ್ಟಿದ್ದಾರೆ. ಅವರು ಆ ಕ್ಲಾರ್ಕ್‌ಗೆ ಕರೆ ಮಾಡಿ ಈ ಡೀಲ್‌ಗೆ ಒಪ್ಪಿಕೊಳ್ಳುವಂತೆ ಟೋನಿಗೆ ಹೇಳಿದ್ದಾರೆ. ಅದರಂತೆ ಟೋನಿ ಕ್ಲಾರ್ಕ್‌ಗೆ ಕರೆ ಮಾಡಿ ಡೀಲ್‌ಗೆ ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ. ನಂತರ ಕ್ಲಾರ್ಕ್ ಹಣ ವಸೂಲಿ ಮಾಡುವುದಕ್ಕಾಗಿ ಒಂದು ಜಾಗವನ್ನು ನಿಗದಿ ಮಾಡಿದ್ದಾನೆ. ಅದರಂತೆ ಆತ ಹೇಳಿದ ಸ್ಥಳಕ್ಕೆ ಟೋನಿಯವರು ಹೋಗಿದ್ದಾರೆ, ಜೊತೆಗೆ ಎಸಿಬಿ ಅಧಿಕಾರಿಗಳು ಅವರನ್ನು ಹಿಂಬಾಲಿಸಿದ್ದಾರೆ. ಈ ಕ್ಲಾರ್ಕ್‌ನನ್ನು ರೆಡ್‌ಹ್ಯಾಂಡ್‌ ಆಗಿ ಸೆರೆ ಹಿಡಿದಿದ್ದಾರೆ.

ರೆಡ್‌ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದ ಕ್ಲಾರ್ಕ್

ಎಸಿಬಿ ಬಲೆಗೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಕ್ಲಾರ್ಕ್ ಚಂದ್ರಕಾಂತ್ ವಾಸುದೇವ್, ನಾನು ಕೇವಲ ನ್ಯಾಯಾಧೀಶರು ಹೇಳಿದ್ದಂತೆ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದ್ದಾನೆ. ಕೂಡಲೇ ಎಸಿಬಿ ಅಧಿಕಾರಿಗಳು ಜಡ್ಜ್‌ಗೆ ಕರೆ ಮಾಡುವಂತೆ ಕ್ಲಾರ್ಕ್‌ಗೆ ಹೇಳಿದ್ದಾರೆ. ಆತ ಜಡ್ಜ್‌ಗೆ ಕರೆ ಮಾಡಿ ಹಣ ಸಿಕ್ಕಿದೆ ಎಂದು ಹೇಳಿದ್ದಾನೆ. ಈ ವೇಳೆ ಜಡ್ಜ್, ಗುಡ್ ಈ ಹಣವನ್ನು ನಾಳೆ ನನಗೆ ಕೊಡು ಎಂದು ಹೇಳಿದ್ದಾರೆ. ಆದರೆ ಈಗ ಕ್ಲಾರ್ಕ್‌ನ್ನು ಎಸಿಬಿ ಅಧಿಕಾರಿಗಳು ಕಂಬಿ ಹಿಂದೆ ಕಳುಹಿಸಿದ್ದು, ಜಡ್ಜ್‌ಗಾಗಿ ಬಲೆ ಬೀಸಿದ್ದಾರೆ.

ಕ್ಲಾರ್ಕ್ ಬಂಧನದ ನಂತರ ಜಡ್ಜ್ ಮಾಡಿದ್ದ ಮೆಸೇಜ್‌ಗಳೇ ಈಗ ಪ್ರಮುಖ ಸಾಕ್ಷಿ

ಇತ್ತ ಆತನ ಬಂಧನದ ಅರಿವಿಲ್ಲದ ಜಡ್ಜ್‌ ನಿರಂತರವಾಗಿ ಕ್ಲಾರ್ಕ್‌ಗೆ ಕರೆ ಮಾಡಿದ್ದು, ಹಣದ ಬಗ್ಗೆ ವಿಚಾರಿಸಿದ್ದಾರೆ, ಹಣವನ್ನು ಪಡೆದು ಈ ಕ್ಲಾರ್ಕ್ ಎಲ್ಲಾದರೂ ಓಡಿರಬಹುದಾ ಎಂಬ ಅನುಮಾನ ಜಡ್ಜ್‌ರದ್ದು, ಈ ಪ್ರತಿ ಸಂದೇಶವನ್ನು ಎಸಿಬಿ ಓದಿದ್ದು, ಇದುವೇ ಈಗ ನ್ಯಾಯಾಲಯಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಇದಾದ ನಂತರ ಎಸಿಬಿ ಅಧಿಕಾರಿಗಳ ತಂಡ ಜಡ್ಜ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆದರೆ ಮನೆ ಲಾಕ್ ಆಗಿದ್ದು, ಜಡ್ಜ್ ನಾಪತ್ತೆಯಾಗಿದ್ದಾರೆ.

ಇದು ಕೇವಲ ಬರೀ ಮುಂಬೈನ ಒಂದು ನ್ಯಾಯಾಲಯದ ಕತೆ ಅಲ್ಲ, ಪ್ರತಿಯೊಬ್ಬ ಕೆಳ ಹಂತದ ನ್ಯಾಯಾಧೀಶರಿಗೂ ಇಂತಹ ಓರ್ವ ಕ್ಲಾರ್ಕ್ ಇರುತ್ತಾರೆ. ಅವರ ಕೆಲಸ ನಿಖರವಾಗಿ ಇದೇ. ನ್ಯಾಯಾಧೀಶರ ಪರವಾಗಿ ಲಂಚ ಕೇಳುವುದು ಮತ್ತು ಸಂಗ್ರಹಿಸುವುದು. ಒಂದು ವೇಳೆ ಅವರು ಸಿಕ್ಕಿಬಿದ್ದಾಗ, ಅವರು ನ್ಯಾಯಾಧೀಶರ ಹೆಸರನ್ನು ಎಂದಿಗೂ ಹೇಳುವುದಿಲ್ಲ ಏಕೆಂದರೆ ಸಮಸ್ಯೆ ತಣ್ಣಗಾದ ನಂತರ, ನ್ಯಾಯಾಧೀಶರೇ ಸಾಮಾನ್ಯವಾಗಿ ತಮ್ಮ ಪ್ರಭಾವದಿಂದ ಅವರನ್ನು ಹೊರಗೆಳೆಯುತ್ತಾರೆ ಎಂದು ಘಟನೆಗೆ ಸಂಬಂಧಿಸಿದಂತೆ ಟ್ವಿಟ್ಟರ್‌ನಲ್ಲಿ @theskindoctor13 ಎಂಬುವವರು ಪೋಸ್ಟ್ ಮಾಡಿದ್ದಾರೆ.

ಸಾಮಾನ್ಯವಾಗಿ ನ್ಯಾಯಾಧೀಶರು ಈ ರೀತಿ ಹಣದ ಆಸೆಗೆ ಮೋಹಕ್ಕೆ ಒಳಗಾಗಬಾರದು, ನ್ಯಾಯಯುತವಾಗಿ ತೀರ್ಪು ನೀಡಬೇಕು ಎಂಬ ಕಾರಣಕ್ಕೆ ಸರ್ಕಾರ ಅವರಿಗೆ ಯಾರಿಗೂ ಇಲ್ಲದ ಸವಲತ್ತುಗಳುನ್ನು ನೀಡುತ್ತದೆ. ಸರ್ಕಾರಿ ಮನೆ ಪ್ರತಿಯೊಂದು ಕೆಲಸಕ್ಕೂ ಆಳುಕಾಳುಗಳು ಕೈತುಂಬಾ ಸಂಬಳ ಇಷ್ಟೆಲ್ಲಾ ಇದ್ದರೂ ಇಲ್ಲಿ ಜಡ್ಜ್‌ಗಳೇ ಭ್ರಷ್ಟಾಚಾರಕ್ಕೆ ಇಳಿದಿದ್ದು, ಜನಸಾಮಾನ್ಯರ ಕಷ್ಟ ಕೇಳುವವರು ಯಾರು?.

ನ್ಯಾಯಾಧೀಶರ ಆರಂಭಿಕ ವೇತನ ಎಷ್ಟು?

ಕೆಳ ಹಂತದ ನ್ಯಾಯಾಧೀಶರ ಆರಂಭಿಕ ವೇತನವೇ ತಿಂಗಳಿಗೆ ಸರಿಸುಮಾರು 1,44,840 ರಿಂದ 1,94,660 ರವರೆಗೆ ಇರುತ್ತದೆ. ಹಾಗೆಯೇ ಜಿಲ್ಲಾ ನ್ಯಾಯಾಧೀಶರ ವೇತನವು ನಿರ್ದಿಷ್ಟ ಸೇವಾ ಅವಧಿ ಅಂದರೆ 5 ವರ್ಷದ ನಂತರ ಸರಿಸುಮಾರು 1,63,030 ರಿಂದ 2,19,090 ರವರೆಗೆ ಹೆಚ್ಚಾಗುತ್ತದೆ. ಹೀಗಿದ್ದರೂ ದೀಪದ ಕೆಳಗೆ ಕತ್ತಲು ಎಂಬಂತೆ ಇಲ್ಲಿ ನ್ಯಾಯ ನೀಡಬೇಕಾದ ನ್ಯಾಯಾಧೀಶರೇ ಅನ್ಯಾಯದ ದಾರಿ ಹಿಡಿದಿದ್ದು, ನ್ಯಾಯ ಎಲ್ಲಿದೆ ಎಂದು ಕೇಳುವಂತಾಗಿದೆ.

ಇದನ್ನೂ ಓದಿ: ತಲೆಗೆ 1 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ ನಕ್ಸಲ್ ನಾಯಕನು ಸೇರಿ 6 ಪ್ರಮುಖ ನಕ್ಸಲರ ಹತ್ಯೆ

ಇದನ್ನೂ ಓದಿ: ಮೆಕ್ಕಾ ಮದೀನಾ ಉಮ್ರಾ ವೇಳೆ ಮೃತಪಟ್ಟರೆ ಶವ ಏಕೆ ಹಿಂದಿರುಗಿಸಲ್ಲ? ಯಾತ್ರೆ ಹೊರಡುವ ಮುನ್ನ ಈ ವಿಚಾರ ತಿಳಿದಿರಲಿ

Scroll to load tweet…