ಮುಂಬೈ[ಜ.08]: ಜೆಎನ್‌ಯು ಹಿಂಸಾಚಾರ ಖಂಡಿಸಿ ಮುಂಬೈನ ಇಂಡಿಯಾ ಗೇಟ್‌ ಬಳಿ ನಡೆದ ಪ್ರತಿಭಟನೆ ವೇಳೆ ರಾರಾಜಿಸುತ್ತಿದ್ದ ‘ಕಾಶ್ಮೀರವನ್ನು ಮುಕ್ತಗೊಳಿಸಿ’ ಘೋಷಣಾ ಫಲಕವೊಂದು ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಪ್ರತಿಪಕ್ಷ ಬಿಜೆಪಿ ಹಾಗೂ ಆಡಳಿತಾರೂಢ ಶಿವಸೇನೆ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ.

ಭಿತ್ತಿಫಲಕವನ್ನು ಶಿವಸೇನೆ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್‌ ರಾವುತ್‌ ಸಮರ್ಥಿಸಿಕೊಂಡಿದ್ದರೆ, ಇದು ದೇಶ ವಿಭಜನೆಯ ಘೋಷಣೆ ಎಂದು ಬಿಜೆಪಿ ಟೀಕಿಸಿದೆ. ಈ ನಡುವೆ ವಿವಾದಾತ್ಮಕ ಫಲಕ ಹಿಡಿದಿದ್ದ ಯುವತಿಯಾಗಿ ಮುಂಬೈ ಪೊಲೀಸರು ಹುಡುಕಾಟ ಆರಂಭಿಸಿದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮೆಹಕ್‌ ಎಂಬ ಯುವತಿ ‘ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದಾದ ಬಳಿಕ, ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಕಸಿಯಲಾಗಿದೆ.

ಅವರು(ಕಾಶ್ಮೀರಿಗಳು) ನಮ್ಮವರೆಂದಾದರೆ, ಅವರನ್ನು ಸರಿಯಾಗಿ ನಡೆಸಿಕೊಳ್ಳಬೇಕು. ಅವರಿಗೆ ಮೂಲಭೂತ ಹಕ್ಕುಗಳನ್ನು ನೀಡಲೇಬೇಕು ಎಂಬುದು ಭಿತ್ತಿಪತ್ರದ ಆಶಯವಾಗಿತ್ತು. ನಾನೋರ್ವ ಮಾನವ ಮೂಲಭೂತ ಹಕ್ಕುಗಳ ಬಗ್ಗೆ ಸಹಾನೂಭೂತಿ ಹೊಂದಿರುವ ಕಲಾವಿದೆಯಾಗಿದ್ದೇನೆ. ಹೀಗಾಗಿ, ದ್ವೇಷದ ವಿರುದ್ಧದ ಪ್ರೀತಿಯೇ ಜಯ ಗೆಲ್ಲಲಿ’ ಎಂದು ಹೇಳಿದ್ದಾರೆ. ಅಲ್ಲದೆ ಘಟನೆ ಕುರಿತು ಕ್ಷಮೆಯಾಚಿಸಿದ್ದಾರೆ.