ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ ವಿದೇಶಿ ಮಹಿಳಾ ಪ್ರವಾಸಿಗರೊಬ್ಬರಿಗೆ ಸೆಲ್ಫಿಗಾಗಿ ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಭಾರತದ ಪ್ರವಾಸಿ ತಾಣಕ್ಕೆ ಬಂದ ವಿದೇಶಿ ಮಹಿಳೆಗೆ ಸೆಲ್ಫಿಗಾಗಿ ಕೆಲ ಗಂಡಸರು ಯುವಕರು ಪಡ್ಡೆಹೈಕಳು ಕಿರುಕುಳ ನೀಡಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂಬೈನ ಗೇಟ್ ವೇ ಆಫ್ ಇಂಡಿಯಾ ಬಳಿ ಈ ಘಟನೆ ನಡೆದಿದೆ.
ನಮ್ಮ ದೇಶದ ವಿವಿಧ ಪ್ರವಾಸಿ ತಾಣಗಳಿಗೆ ಬರುವ ವಿದೇಶಿ ಪ್ರವಾಸಿರಿಗೆ ಕಿರುಕುಳ ನೀಡಿದ ಪ್ರಕರಣಗಳು ಈ ಹಿಂದೆಯೂ ಹಲವು ಬಾರಿ ನಡೆದಿವೆ. ಅದೇ ರೀತಿ ಈಗ ಮುಂಬೈನಲ್ಲಿ ವಿದೇಶಿ ಮಹಿಳೆಗೆ ಸೆಲ್ಪಿಗಾಗಿ ಕೆಲ ಪುರುಷರು ಕಿರುಕುಳ ನೀಡಿದ್ದಾರೆ. ಯಾರದೇ ಆಗಲಿ ಪರಿಚಯವಿದ್ದವರು ಆತ್ಮೀಯರ ಹೆಗಲಿಗೆ ಕೈ ಹಾಕಿ ಫೋಟೋ ತೆಗೆಯುವುದು ಸಾಮಾನ್ಯ. ಆದರೆ ಇಲ್ಲಿ ಪರಿಚಯವೇ ಇಲ್ಲದ ಮಹಿಳೆಗೆ ಕೆಲ ಯುವಕರು ತಮ್ಮ ಪ್ರೇಯಸಿಯೇನೋ ಎಂಬಂತೆ ಆಕೆಯ ಹೆಗಲಿಗೆ ಕೈ ಹಾಕಿ ಫೋಟೋ ತೆಗೆದುಕೊಂಡಿದ್ದು, ಕೆಲ ಗಂಡಸರ ಈ ವರ್ತನೆಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ವೀಡಿಯೋವನ್ನು ಡಾ ಶೀತಲ್ ಯಾದವ್ ಎಂಬುವವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ನಮ್ಮ ದೇಶದಲ್ಲಿ ಜನರ ಈ ರೀತಿಯ ವರ್ತನೆಯ ಕಾರಣಕ್ಕೆ ಅಮೆರಿಕಾ ತನ್ನ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಭಾರತ ಭೇಟಿಯ ವೇಳೆ ಪ್ರವಾಸಿ ಸಲಹಾವಳಿಗಳನ್ನು ನೀಡುತ್ತದೆ. ಅದರಲ್ಲಿ ಮಹಿಳೆಯರು ಭಾರತದಲ್ಲಿ ಒಂಟಿಯಾಗಿ ಪ್ರಯಾಣಿಸುವಂತಿಲ್ಲ, ಒಂದು ವೇಳೆ ಪ್ರಯಾಣಿಸಿದಲ್ಲಿ ಅವರು ಬಲತ್ಕಾರ ಅಥವಾ ಹಿಂಸೆಗೆ ತುತ್ತಾಗುವ ಸಂಭವವಿರುತ್ತದೆ ಎಂದು ಅಮೆರಿಕಾದ ಟ್ರಾವೆಲ್ ಅಡ್ವೈಸರಿ ಸೂಚಿಸುತ್ತದೆ ಎಂದು ಶೀತಲ್ ಯಾದವ್ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.
ಸೆಲ್ಫಿಗಾಗಿ ವಿದೇಶಿ ಮಹಿಳೆಗೆ ಮುತ್ತಿಗೆ
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಮುಂಬೈನ ಗೇಟ್ ವೇ ಆಫ್ ಇಂಡಿಯಾ ನೋಡುವುದಕ್ಕೆ ಮಹಿಳಾ ವಿದೇಶಿ ಪ್ರವಾಸಿಗರೊಬ್ಬರು ಒಂಟಿಯಾಗಿ ಬಂದಿದ್ದಾರೆ. ಈ ವೇಳೆ ಆಕೆಯನ್ನು ನೋಡಿದ ವ್ಯಕ್ತಿಯೊಬ್ಬ ಆಕೆಯ ಬಳಿ ಸೆಲ್ಫಿ ಕೇಳಿದ್ದಾನೆ. ಆಕೆ ಅದಕ್ಕೆ ಒಪ್ಪಿಗೆ ಸೂಚಿಸುವುದಕ್ಕೂ ಮೊದಲೇ ಆತ ಆಕೆಯ ಹೆಗಲಿಗೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾನೆ. ಇದನ್ನು ನೋಡಿದ ಅಲ್ಲಿದ್ದ ಪುರುಷರೆಲ್ಲಾ ಆಕೆಯನ್ನು ಮುತ್ತಿಕೊಂಡು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಬಹುತೇಕ ಎಲ್ಲರ ಕೈಯಲ್ಲಿ ಫೋನ್ ಇದ್ದು, ಅವಳ ಹೆಗಲಿಗೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ಅವರೆಲ್ಲರೂ ಆಕೆಯ ಸುತ್ತಲೂ ಗುಂಪು ಸೇರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಈ ದೃಶ್ಯ ಅನೇಕರನ್ನು ಗಾಬರಿಗೀಡು ಮಾಡಿದೆ.
ಈ ವೇಳೆ ಅಷ್ಟೊಂದು ಯುವಕರನ್ನು ನೋಡಿ ಮಹಿಳೆಗೆ ಇರಿಸುಮುರಿಸಾಗಿದ್ದು, ಆಕೆ ಒಂದು ಫೋಟೋಗೆ 100 ರೂಪಾಯಿ ನೀಡುವಂತೆ ಕೇಳಿದ್ದಾಳೆ. ಈ ವೀಡಿಯೋ ಕೆಲವೇ ಕ್ಷಣದಲ್ಲಿ ವೈರಲ್ ಆಗಿದ್ದು, ಅಲ್ಲಿ ಸೆಲೆಬ್ರಿಟಿಯಂತೆ ಆಕೆಗೆ ಮುಗಿಬಿದ್ದ ಯುವಕರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅನೇಕರು ನೋಡಿ ಆ ವ್ಯಕ್ತಿ ತನ್ನ ಹೆಂಡತಿಯೇನೋ ಎಂಬಂತೆ ಆ ವಿದೇಶಿ ಪ್ರವಾಸಿ ಮಹಿಳೆಯ ಹೆಗಲಿನ ಸುತ್ತ ಹೇಗೆ ತರುತ್ತಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.
ಅಲ್ಲದೇ ಕೆಲವರು ಈ ವೀಡಿಯೋವನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿದ್ದು, ಈ ಪುರುಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇಂತಹವರಿಂದಲೇ ಭಾರತಕ್ಕೆ ವಿದೇಶದಲ್ಲಿ ಕೆಟ್ಟ ಹೆಸರು ಬರುತ್ತಿದೆ. ಇಂತಹ ವ್ಯಕ್ತಿಗಳನ್ನು ಕಂಬಿ ಹಿಂದೆ ಕಳಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ರೀತಿ ಭಾರತಕ್ಕೆ ಪ್ರವಾಸ ಬರುವ ವಿದೇಶಿಗರನ್ನು ಇಂತಹ ಜನರಿಂದ ರಕ್ಷಿಸಿ, ಇವರು ದೇಶದ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೇಗೆ ವಿದೇಶಿ ಮಹಿಳೆಯ ಜೊತೆ ಇವರು ನಡೆದುಕೊಳ್ಳುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಕಳೆದ ವರ್ಷ ದೆಹಲಿಯ ಇಂಡಿಯಾ ಗೇಟ್ ಬಳಿ ರಷ್ಯನ್ ಮೂಲದ ಪ್ರವಾಸಿಗರೊಬ್ಬರಿಗೆ ಇದೇ ರೀತಿಯ ಕಿರುಕುಳ ನೀಡಲಾಗಿತ್ತು. ಸ್ಥಳೀಯ ಡಾನ್ಸರ್ ಒಬ್ಬರು ಮಹಿಳೆಗೆ ಇರಿಸು ಮುರಿಸಾಗುವಂತೆ ನಡೆಸಿಕೊಂಡಿದ್ದರು. ಮಹಿಳೆ ಫೋಟೋ ತೆಗೆಯಲು ಪ್ರಯತ್ನಿಸುತ್ತಿರುವಾಗ, ಆ ವ್ಯಕ್ತಿ ತನ್ನೊಂದಿಗೆ ನೃತ್ಯ ಮಾಡುವಂತೆ ನಿರಂತರವಾಗಿ ಒತ್ತಾಯಿಸುತ್ತಿರುವುದನ್ನು ವೀಡಿಯೊದಲ್ಲಿ ಸೆರೆ ಆಗಿತ್ತು. ಆಕೆಯ ವಿರೋಧದ ಹೊರತಾಗಿಯೂ ಆ ವ್ಯಕ್ತಿ ವೀಡಿಯೋ ಮಾಡುವುದನ್ನು ಮುಂದುವರೆಸಿದ್ದು, ಕ್ಷಮೆಯಾಚಿಸುವ ಬದಲು ಆ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ಗೆ ಅಪ್‌ಲೋಡ್ ಮಾಡಿದ್ದ.
