ಮುಂಬೈ(ಮಾ.07): ಮುಂಬೈನಲ್ಲಿ ಮುಕೇಶ್ ಅಂಬಾನಿ ಮನೆ ಬಳಿ ಪತ್ತೆಯಾಗಿದ್ದ ಸ್ಫೋಟಕ ತುಂಬಿದ SUV ಸ್ಕಾರ್ಪಿಯೋ ಕಾರು ಮಾಲೀಕ ಹಿರೇನ್ ಮನ್‌ಸುಖ್ ಸಾವಿಗೂ ಒಂದು ದಿನ ಮೊದಲು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಪತ್ರವೊಂದನ್ನು ಬರೆದಿದ್ದರು. ಇದರಲ್ಲಿ ಅವರು ಪೊಲೀಸರು ಹಾಗೂ ಪತ್ರಕರ್ತರು ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಬರೆದಿದ್ದರು. 

ಅಲ್ಲದೇ ತಮ್ಮ ಪತ್ರದಲ್ಲಿ ಹಿರೇನ್‌ರವರು, ರಾಜ್ಯ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಗೃಹ ಸಚಿವ ಹಾಗೂ ಪೊಲೀಸ್ ಆಯುಕ್ತರ ಬಳಿ ಕಾನೂನಾತ್ಮಕ ತನಿಖೆ ಹಾಗೂ ಭದ್ರತೆ ನೀಡುವಂತೆ ಕೋರಿದ್ದರು. ಅಲ್ಲದೇ ಕೆಲ ಪೊಲೀಸರು ಹಾಗೂ ಪತ್ರಕರ್ತರು ತಮಗೆ ಕಿರುಕುಳ ನೀಡುತ್ತಿದ್ದಾರೆಂದೂ ಉಲ್ಲೇಖಿಸಿದ್ದರು.

ಹಿರೇನ್ ಕುಟುಂಬ ಸದಸ್ಯರು ನೀಡಿದ ಮಾಹಿತಿ ಅನ್ವಯ, ಅವರು ಗುರುವಾರದಿಂದಲೇ ನಾಪತ್ತೆಯಾಗಿದ್ದರು. ಸದ್ಯ ಅಪಘಾತದಲ್ಲಿ ಸಾವು ಸಂಭವಿಸಿರುವುದಾಗಿ ಪ್ರಕರಣ ದಾಖಲಾಗಿದೆ. ಇನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ವರ್ಗಾಯಿಸಲಾಗಿದೆ ಎಂದಿದ್ದಾರೆ. ಇನ್ನು ಇದಕ್ಕೂ ಮೊದಲು ದೇಶ್‌ಮುಖ್ ತಮ್ಮ ಹೇಳಿಕೆಯೊಂದರಲ್ಲ ಈ ಕಾರು ಹಿರೇನ್‌ರವರದ್ದು ಅಲ್ಲವೆಂದಿದ್ದರು. ಕಾರು ಸ್ಯಾಮ್ ಮ್ಯೂಟೆಬ್ ಎಂಬವರ ಹೆಸರಿನಲ್ಲಿದೆ. ಹಿರೇನ್ ಈ ಕಾರಿನ ಇಂಟೀರಿಯರ್ ಮಾಡಿದ್ದರು. ಆವರೊಬ್ಬ ಕಾರು ಬಿಡಿಭಾಗಗಳ ವ್ಯಾಪಾರಿಯಾಗಿರುವ ಹಿರೇನ್ ಇತ್ತೀಚೆಗಷ್ಟೇ ತಮ್ಮ ಕಾರು ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಅಸಲಿ ಮಾಲೀಕ ಕೆಲಸ ಮಾಡಿದ್ದ ಹಣ ನೀಡಿರಲಿಲ್ಲ ಹೀಗಾಗಿ ಹಿರೇನ್ ಈ ಕಾರು ಮರಳಿಸಿರಲಿಲ್ಲ ಎಂದಿದ್ದರು.

ಇವೆಲ್ಲದರ ನಡುವೆ ಸಿಸಿಟಿವಿ ದೃಶ್ಯವೊಂದು ಬಹಿರಂಗಗೊಂಡಿದೆ. ಇದರಲ್ಲಿ ಗುರುವಾಗ ಹಿರೇನ್ ತಮ್ಮ ಮನೆ ಹೊರಗೆ ಓಡಾಡುತ್ತಿರುವ ದೃಶ್ಯವಿದೆ. ಮಾರ್ಚ್ 2ರಂದು ಅವರು ಬರೆದಿದ್ದ ಪತ್ರದಲ್ಲಿ ಹೇಗೆ ತನ್ನ ಕಾರು ಕಳ್ಳತನವಾಗಿದೆ ಹಾಗೂ ಪೊಲೀಸರು ಹೇಗೆ ಕಿರುಕುಳ ನೀಡುತ್ತಿದ್ದಾರೆಂದು ಉಲ್ಲೇಖಿಸಿದ್ದರು. 

ಇನ್ನು ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಫಡ್ನವೀಸ್ ಮುಖ್ಯ ಸಾಕ್ಷಿದಾರನ ಸಾವಿನಿಂದ ಯಾವುದೋ ರಹಸ್ಯ ಅಡಗಿದೆ ಎಂಬ ಸಂಕೇತ ಸಿಗುತ್ತದೆ. ಹೀಗಾಗಿ ಈ ಪ್ರಕರಣವನ್ನು NIAಗೆ ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದರು.

ಫೆಬ್ರವರಿ 25 ರಂದು ಉದ್ಯಮಿ ಅಮುಕೆಶ್ ಅಂಬಾನಿಯವರ ಬಹುಮಹಡಿ ನಿವಾಸ ಆಂಟಿಲಿಯಾ ಬಳಿ, ಹಿರೇನ್ ಮಾಲೀಕತ್ವದ ಕಾರಿನಲ್ಲಿ ಸ್ಪೋಟಕವಿರುವುದು ಪತ್ತೆಯಾಗಿತ್ತು.