ನವದೆಹಲಿ[ಡಿ.06]: ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರು, ಸಿಬ್ಬಂದಿಗಳು ಹಾಗು ಸಂದರ್ಶಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಡಿಸೆಂಬರ್‌ 5ರಿಂದಲೇ ಜಾರಿಯಾಗುವಂತೆ ನಿಲ್ಲಿಸಲಾಗಿದೆ. ಸಂಸದರು ಹಾಜರಾಗಿದ್ದ ಸಂಸತ್ತಿನ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಎಲ್ಲ ಪಕ್ಷಗಳು ಸಬ್ಸಿಡಿ ಅಂತ್ಯಗೊಳಿಸಲು ಸಮ್ಮತಿಸಿದವು. ಹೀಗಾಗಿ ಇನ್ನು ಕ್ಯಾಂಟೀನ್‌ನಲ್ಲಿ ಸಬ್ಸಿಡಿ ನಿಲ್ಲಲಿದ್ದು, ಮಾರುಕಟ್ಟೆದರದಲ್ಲಿಯೇ ದುಡ್ಡು ನೀಡಿ ತಿಂಡಿ-ಊಟ ಸೇವಿಸಬೇಕಾಗುತ್ತದೆ’ ಎಂದು ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಗುರುವಾರ ಹೇಳಿದ್ದಾರೆ.

ಸರ್ಕಾರವು ಪ್ರತಿ ವರ್ಷ ಸಂಸತ್‌ ಕ್ಯಾಂಟೀನ್‌ ಸಬ್ಸಿಡಿಗಾಗಿ 17 ಕೋಟಿ ರು. ನೀಡುತ್ತಿತ್ತು. ಈಗಿನ ನಿರ್ಧಾರದಿಂದ 17 ಕೋಟಿ ರು. ಉಳಿತಾಯವಾಗಲಿದೆ. 14 ಕೋಟಿ ರು. ಸಬ್ಸಿಡಿಯು ಸಿಬ್ಬಂದಿಗಳು ಹಾಗೂ ಸಂದರ್ಶಕರಿಗೆ ಸಿಗುತ್ತಿದ್ದರೆ, 3 ಕೋಟಿ ರು. ಸಬ್ಸಿಡಿ ಸಂಸದರಿಗೆ ಸಿಗುತ್ತಿತ್ತು.

ಸಬ್ಸಿಡಿ ನಿಲ್ಲಿಸಿರುವ ಕಾರಣ ಇನ್ನು ಮುಂದೆ 65 ರು.ಗೆ ಸಿಗುತ್ತಿದ್ದ ಬಿರಿಯಾನಿ ಬೆಲೆ 112 ರು.ಗೆ ಏರಬಹುದು ಎಂದು ಮೂಲಗಳು ಹೇಳಿವೆ. ಐಆರ್‌ಸಿಟಿಸಿ ಸಂಸತ್‌ ಆವರಣದಲ್ಲಿ ಒಟ್ಟು 5 ಕ್ಯಾಂಟೀನ್‌ ನಡೆಸುತ್ತದೆ.

ಸಬ್ಸಿಡಿ ದರದಲ್ಲಿ ಸಿಗುತ್ತಿದ್ದ ಆಹಾರದ ಲಿಸ್ಟ್‌ (ರು.ಗಳಲ್ಲಿ):

ಚಹಾ 5, ಕಾಫಿ 5, ಬ್ರೆಡ್‌ ಬಟರ್‌ 6, ವಡಾ ಪ್ಲೇಟ್‌ 12, ಕಟ್ಲೆಟ್‌ 18, ಅವಲಕ್ಕಿ 18, ಉಪ್ಪಿಟ್ಟು 18, ಬೋಂಡಾ 7, ಸೂಪು 14, ಕೇಸರಿ ಬಾತ್‌ 24, ಸಸ್ಯಾಹಾರಿ ಊಟ 35, ವೆಜ್‌ ಕರಿ 7, ದಾಲ್‌ 5, ಚಪಾತಿ 2, ಖೀರು 18, ಸಲಾಡ್‌ 9, ಚಿಕನ್‌ ಕರಿ 50, ಚಿಕನ್‌ ಬಿರಿಯಾನಿ 65, ಚಿಕನ್‌ ಡ್ರೈ 60, ಮಟನ್‌ ಕರಿ 40.