ನವದೆಹಲಿ[ಮಾ.06]: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆಯಿಂದಲೇ ಭಾರತದಲ್ಲಿ ಕೊರೋನಾ ವೈರಸ್‌ ಹಬ್ಬಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂಬ ಬಿಜೆಪಿ ಸಂಸದ ಹನುಮಾನ ಬೇನಿವಾಲ್‌ ಅವರ ಹೇಳಿಕೆಯೊಂದು ಗುರುವಾರ ಸಂಸತ್ತಿನ ಉಭಯ ಸದನಗಳಲ್ಲೂ ಭಾರೀ ಕೋಲಾಹಲ ಸೃಷ್ಟಿಸಿದೆ.

ಗುರುವಾರ ಲೋಕಸಭೆ ಕಲಾಪದ ವೇಳೆ ಮಾತನಾಡಿದ ಬೇನಿವಾಲ್‌, ‘ಭಾರತದಲ್ಲಿ ಸೋಂಕು ಪತ್ತೆಯಾದ ಬಹುತೇಕ ಜನರು ಇಟಲಿ ಮೂಲದವರು. ಹೀಗಾಗಿ ಸೋನಿಯಾ ಅವರ ಮನೆಯಿಂದಲೇ ಭಾರತಕ್ಕೆ ಸೋಂಕು ಹಬ್ಬಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬೇನಿವಾಲ್‌ ಅವರ ಈ ಹೇಳಿಕೆಗೆ ಕಾಂಗ್ರೆಸ್‌ ಸದಸ್ಯರು ಸಂಸತ್ತಿನ ಉಭಯ ಸದನಗಳಲ್ಲೂ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಎಬ್ಬಿಸಿದರು. ಜೊತೆಗೆ ಬೇನಿವಾಲ್‌ ಕ್ಷಮೆಗೆ ಆಗ್ರಹಿಸಿದರು. ಹೀಗಾಗಿ ಕಲಾಪವನ್ನೇ ಮುಂದೂಡಬೇಕಾಗಿ ಬಂತು. ಮತ್ತೊಂದೆಡೆ ಬಿಜೆಪಿ ಸಂಸದ ರಮೇಶ್‌ ಬಿಧೂರಿ ಕೂಡಾ, ಸೋನಿಯಾ ಮತ್ತು ರಾಹುಲ್‌ ಇತ್ತೀಚೆಗೆ ಇಟಲಿಯಿಂದ ಮರಳಿದ್ದಾರೆ. ಹೀಗಾಗಿ ಅವರನ್ನೂ ಕೊರೋನಾ ಸೋಂಕು ಪತ್ತೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.