ನವದೆಹಲಿ(ನ.19): ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂಪುಟದ 14 ಸಚಿವರ ಪೈಕಿ 8 ಸಚಿವರು ತಮ್ಮ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾಮ್ಸ್‌ರ್‍(ಎಡಿಆರ್‌) ತಿಳಿಸಿದೆ. ಅಂದರೆ ನಿತೀಶ್‌ ಕ್ಯಾಬಿನೆಟ್‌ನಲ್ಲಿ ಶೇ.57ರಷ್ಟುಸಚಿವರು ಕ್ರಿಮಿನಲ್‌ ಕೇಸ್‌ ಎದುರಿಸುತ್ತಿದ್ದಾರೆ.

ಈ ಪೈಕಿ 6 ಸಚಿವರ ವಿರುದ್ಧ ಜಾಮೀನು ರಹಿತ ಮತ್ತು 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾದ ಗಂಭೀರ ಪ್ರಮಾಣದ ಪ್ರಕರಣಗಳು ದಾಖಲಾಗಿವೆ. ಇನ್ನು 14 ಸಚಿವರ ಪೈಕಿ 13 ಮಂದಿ ಅಂದರೆ ಶೇ.93ರಷ್ಟುಪ್ರಮಾಣದಷ್ಟುಸಚಿವರು ಕೋಟ್ಯಾಧಿಪತಿಗಳಾಗಿದ್ದಾರೆ.

ಮುಸ್ಲಿಂ ಸಚಿವರಿಲ್ಲದೆ ನಿತೀಶ್ ಸಂಪುಟ, ಅಸಲಿಗೆ ಒಬ್ಬ ಶಾಸಕನೂ ಇಲ್ಲ!

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ತಾರ್‌ಕಿಶೋರ್‌ ಶರ್ಮಾ ಹಾಗೂ ರೇಣು ದೇವಿ ಅವರಿಗೆ ಉಪಮುಖ್ಯಮಂತ್ರಿ ಪದವಿ ಪ್ರಾಪ್ತಿಯಾಗಿದೆ. ಈವರೆಗೆ ಉಪಮುಖ್ಯಮಂತ್ರಿ ಆಗಿದ್ದ ಸುಶೀಲ್‌ ಮೋದಿ ಅವರನ್ನು ಕೇಂದ್ರ ರಾಜಕೀಯಕ್ಕೆ ಕಳಿಸಿ ಈ ಇಬ್ಬರೂ ಹೊಸ ಮುಖಗಳಿಗೆ ಬಿಜೆಪಿ ಆದ್ಯತೆ ನೀಡಿದೆ.

ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿರುವ ಬಿಜೆಪಿಯ 7 ಜನರು ಸಚಿವರಾದರೆ, ಜೆಡಿಯುನಿಂದ 5, ಬಿಹಾರ ಮಾಜಿ ಮುಖ್ಯಮಂತ್ರಿ ಜಿತಿನ್‌ ರಾಮ್‌ ಮಾನ್ಝೀ ನೇತೃತ್ವದ ಎಚ್‌ಎಎಂ ಹಾಗೂ ವಿಐಪಿಯಿಂದ ತಲಾ ಒಬ್ಬರು ಸಂಪುಟ ಪ್ರವೇಶಿಸಿದ್ದಾರೆ.
ಬಿಹಾರ ಸಿಎಂ ಆದ ನಿತೀಶ್ ಕುಮಾರ್, ಚುನಾವಣಾ ತಂತ್ರಗಾರ ಕೊಟ್ಟ ಪ್ರತಿಕ್ರಿಯೆ ಇದು!

ನಿತೀಶ್‌ ಪದಗ್ರಹಣದ ಬಗ್ಗೆ ವಿಪಕ್ಷಗಳು ವ್ಯಂಗ್ಯವಾಡಿವೆ. ಅವರು ಬಿಜೆಪಿ ಕೈಗೊಂಬೆ ಆಗದಿರಲಿ ಹಾಗೂ ಎನ್‌ಡಿಎ ಮುಖ್ಯಮಂತ್ರಿ ಆಗಿಯೇ 5 ವರ್ಷ ಪೂರ್ಣಗೊಳಿಸಲಿ ಎಂದು ಕುಹಕವಾಡಿವೆ.