Monsoon In India: ನಾಲ್ಕು ದಿನ ತಡವಾಗಿ ಕೇರಳಕ್ಕೆ ಮಾನ್ಸೂನ್ ಪ್ರವೇಶ, ಈ ವರ್ಷ ಸಾಮಾನ್ಯ ಮಳೆ!
ಈ ಬಾರಿ ದೇಶಕ್ಕೆ ಮಾನ್ಸೂನ್ ನಾಲ್ಕು ದಿನ ತಡವಾಗಿ ಆಗಮಿಸಿದೆ. ಜೂನ್ 5 ರಂದು ಕೇರಳಕ್ಕೆ ಮುಂಗಾರು ಮಾರುತ ಪ್ರವೇಶವಾಗಲಿದೆ. ಈ ಬಾರಿ ಸಾಮಾನ್ಯ ಮಳೆಯಾಗುವ ಮುನ್ಸೂಚನೆಯನ್ನು ಕೇಂದ್ರ ಹವಮಾನ ಇಲಾಖೆ ನೀಡಿದೆ.
ನವದೆಹಲಿ (ಮೇ.16): ನೈಋತ್ಯ ಮಾನ್ಸೂನ್ ಈ ವರ್ಷ ನಾಲ್ಕು ದಿನಗಳ ವಿಳಂಬವಾಗಿ ಕೇರಳಕ್ಕೆ ಪ್ರವೇಶ ಪಡೆದುಕೊಳ್ಳಲಿದೆ. ಭಾರತೀಯ ಹವಾಮಾನ ಇಲಾಖೆ ಅಂದರೆ ಐಎಂಡಿ ಪ್ರಕಾರ, ಮಾನ್ಸೂನ್ ಜೂನ್ 5 ರ ವೇಳೆಗೆ ದಕ್ಷಿಣದ ರಾಜ್ಯವನ್ನು ತಲುಪಬಹುದು. ಸಾಮಾನ್ಯವಾಗಿ ಮಾನ್ಸೂನ್ ಮಾರುತಗಳು ಜೂನ್ 1 ರಂದು ಕೇರಳಕ್ಕೆ ಅಪ್ಪಳಿಸುತ್ತಿತ್ತು. ಮಾನ್ಸೂನ್ ಪ್ರವೇಶದೊಂದಿಗೆ ದೇಶದಲ್ಲಿ ಮಳೆಗಾಲ ಅಧಿಕೃತವಾಗಿ ಆರಂಭ ಎಂದು ಪರಿಗಣನೆ ಮಾಡಲಾಗುತ್ತದೆ. ಕಳೆದ ವರ್ಷ ಮೇ 29 ರಂದೇ ಕೇರಳಕ್ಕೆ ಮುಂಗಾರು ಆಗಮಿಸಿದ್ದರೆ, 2021ರಲ್ಲಿ ಜೂನ್ 1 ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಿತ್ತು.
ಈ ವರ್ಷ ಸಾಮಾನ್ಯ ಮಳೆಯ ಮುನ್ಸೂಚನೆ: ಈ ವರ್ಷ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ತಿಂಗಳು ಹವಾಮಾನ ಇಲಾಖೆ ಈ ಮಾಹಿತಿ ನೀಡಿತ್ತು. ಮಳೆ ಸಾಮಾನ್ಯವಾಗಿದ್ದರೆ, ದೇಶದಲ್ಲಿ ಆಹಾರ ಧಾನ್ಯ ಉತ್ಪಾದನೆಯೂ ಸಾಮಾನ್ಯವಾಗಿರುತ್ತದೆ. ಅಂದರೆ, ಇದು ಹಣದುಬ್ಬರದಿಂದ ಪರಿಹಾರವನ್ನು ನೀಡಬಹುದು. ದೇಶದ ರೈತರು ಸಾಮಾನ್ಯವಾಗಿ ಜೂನ್ 1 ರಿಂದ ಬೇಸಿಗೆ ಬೆಳೆಗಳನ್ನು ಬಿತ್ತನೆ ಮಾಡಲು ಪ್ರಾರಂಭಿಸುತ್ತಾರೆ. ಇದು ಮುಂಗಾರು ಮಳೆ ಭಾರತವನ್ನು ತಲುಪುವ ಸಮಯ. ಆಗಸ್ಟ್ ಆರಂಭದವರೆಗೂ ಬೆಳೆಯ ಬಿತ್ತನೆ ಮುಂದುವರಿಯುತ್ತದೆ.
ಸಾಮಾನ್ಯ ಮಳೆ ಎಂದರೇನು?: ದೀರ್ಘಾವಧಿಯ ಸರಾಸರಿ (LPA) ಯ 96% ನಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ. ಮಳೆಯು 90-95% ನಷ್ಟು ಎಲ್‌ಪಿಎಯ ನಡುವೆ ಇದ್ದರೆ ಅದು ಸಾಮಾನ್ಯಕ್ಕಿಂತ ಕಡಿಮೆ ಎಂದು ಹೇಳಲಾಗುತ್ತದೆ. ಎಲ್‌ಪಿಎ 96%-104% ಆಗಿದ್ದರೆ ಅದನ್ನು ಸಾಮಾನ್ಯ ಮಳೆ ಎಂದು ಕರೆಯಲಾಗುತ್ತದೆ. ಎಲ್‌ಪಿಎ 104% ಮತ್ತು 110% ರ ನಡುವೆ ಇದ್ದರೆ, ಅದನ್ನು ಹೆಚ್ಚುವರಿ ಮಳೆ ಎಂದು ಕರೆಯಲಾಗುತ್ತದೆ. ಎಲ್‌ಪಿಎ 110% ಇರೋದನ್ನು ಹೆಚ್ಚು ಮಳೆ ಎಂದು ಕರೆಯಲಾಗುತ್ತದೆ ಮತ್ತು 90% ಕ್ಕಿಂತ ಕಡಿಮೆ ಮಳೆ ಎಂದು ಕರೆಯಲಾಗುತ್ತದೆ.
ಆರ್ಥಿಕತೆಗೆ ಉತ್ತಮ ಮಳೆ ಅಗತ್ಯ: ದೇಶದಲ್ಲಿ ವಾರ್ಷಿಕ ಮಳೆಯ 70% ನೈಋತ್ಯ ಮಾನ್ಸೂನ್ ನಲ್ಲಿ ಪಡೆಯಲಾಗುತ್ತದೆ. ಈಗಲೂ ನಮ್ಮ ದೇಶದಲ್ಲಿ ಶೇ.70ರಿಂದ 80ರಷ್ಟು ರೈತರು ನೀರಾವರಿಗಾಗಿ ಮಾನ್ಸೂನ್ ಮಳೆ ನೀರನ್ನೇ ಅವಲಂಬಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳ ಉತ್ಪಾದನೆಯು ಸಂಪೂರ್ಣವಾಗಿ ಉತ್ತಮ ಅಥವಾ ಕೆಟ್ಟ ಮಾನ್ಸೂನ್ ಅನ್ನು ಅವಲಂಬಿಸಿರುತ್ತದೆ. ಕೆಟ್ಟ ಮಾನ್ಸೂನ್ ಇದ್ದಾಗ ಹಣದುಬ್ಬರವೂ ಹೆಚ್ಚಾಗುತ್ತದೆ. ಭಾರತದ ಆರ್ಥಿಕತೆಯಲ್ಲಿ ಕೃಷಿ ಕ್ಷೇತ್ರದ ಪಾಲು ಸುಮಾರು 20%. ಅದೇ ಸಮಯದಲ್ಲಿ, ಕೃಷಿ ಕ್ಷೇತ್ರವು ದೇಶದ ಜನಸಂಖ್ಯೆಯ ಅರ್ಧದಷ್ಟು ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ. ಉತ್ತಮ ಮಳೆ ಎಂದರೆ ಅರ್ಧದಷ್ಟು ಜನಸಂಖ್ಯೆಯ ಆದಾಯವು ಹಬ್ಬ ಹರಿದಿನಗಳ ಮೊದಲು ಉತ್ತಮವಾಗಿರುತ್ತದೆ. ಇದರಿಂದ ಅವರ ಖರ್ಚು ಸಾಮರ್ಥ್ಯವೂ ಹೆಚ್ಚುತ್ತದೆ.
ಮಾನ್ಸೂನ್‌ನಲ್ಲಿ ಪಶ್ಚಿಮ ಘಟ್ಟದ ಈ ಪ್ರದೇಶ ಭೂಲೋಕದ ಸ್ವರ್ಗ
ದೇಶದಲ್ಲಿ ಮುಂಗಾರು ಮಳೆಯ ನಿಯಮವೇನು?: ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕದಲ್ಲಿ ಮಾನ್ಸೂನ್ ಆರಂಭವನ್ನು ಘೋಷಿಸಿದ 8 ಕೇಂದ್ರಗಳಲ್ಲಿ ಸತತ ಎರಡು ದಿನಗಳವರೆಗೆ ಕನಿಷ್ಠ 2.5 ಮಿಮೀ ಮಳೆಯಾದಾಗ ದೇಶಕ್ಕೆ ಮುಂಗಾರು ಆಗಮಿಸಿದೆ ಎಂದು ಘೋಷಣೆ ಮಾಡಲಾಗುತ್ತದೆ.