* ಕರ್ನಾಟಕದಲ್ಲೂ ಕುಸಿದ ಮಳೆಯ ಪ್ರಮಾಣ* ದೇಶದಲ್ಲಿ ಜೂನ್‌ನಲ್ಲಿ ಶೇ.8ರಷ್ಟುಮಳೆ ಕೊರತೆ* ಇದು ಕಳೆದ 7 ವರ್ಷಗಳಲ್ಲೇ ಕನಿಷ್ಠ* ಜುಲೈನಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆ
ನವದೆಹಲಿ(ಜು.02): ಕಳೆದ 2 ವರ್ಷ ಜೂನ್ ತಿಂಗಳಲ್ಲಿ ಹೆಚ್ಚಾಗಿ ಸುರಿದಿದ್ದ ಮುಂಗಾರು ಮಳೆ ಈ ವರ್ಷ ದೇಶದಲ್ಲಿ ಶೇ.8ರಷ್ಟುಕುಂಠಿತಗೊಂಡಿದೆ. ಈ ವರ್ಷದ ಜೂನ್‌ನಲ್ಲಿ ದೇಶದಲ್ಲಿ ಸರಾಸರಿ 15.23 ಸೆಂ.ಮೀ. ಮಳೆಯಾಗಿದೆ. ಇದು ಸಾಮಾನ್ಯಕ್ಕಿಂತಲೂ ಕಡಿಮೆಯಾಗಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ಭಾರತದ ಸರಾಸರಿ ಮಳೆಯ ಪ್ರಮಾಣ 16.53 ಸೆಂ.ಮೀ.
ಇನ್ನು ಕರ್ನಾಟದಲ್ಲೂ ಜೂನ್‌ನಲ್ಲಿ ಮಳೆಯ ಕೊರತೆ ಎದುರಾಗಿದ್ದು, ಒಟ್ಟಾರೆ 14.5 ಸೆಂ.ಮೀ. ಮಳೆಯಾಗಿದೆ. ಕರ್ನಾಟಕದಲ್ಲಿ ಸಾಮಾನ್ಯ ಮಳೆಯ ಪ್ರಮಾಣ ಶೇ.19.1 ಸೆಂ.ಮೀ ಆಗಿದೆ.
ಕೇರಳ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಒಟ್ಟು 18 ರಾಜ್ಯಗಳು ಈ ಬಾರಿ ಮಳೆಯ ಕೊರತೆ ಎದುರಿಸಿವೆ. ಇದು ಕಳೆದ 7 ವರ್ಷಗಳಲ್ಲೇ ಜೂನ್‌ನಲ್ಲಿ ಬಿದ್ದ ಕಡಿಮೆ ಮಳೆ ಪ್ರಮಾಣವಾಗಿದೆ. ಈ ಬಾರಿ ನೈಋುತ್ಯ ಮಾನ್ಸೂನ್ ಮೇ 29ರಂದು ಕೇರಳಕ್ಕೆ ಪ್ರವೇಶ ಪಡೆದರೂ, ಅದರ ಪ್ರಗತಿ ಮಂದಗತಿಯಲ್ಲಿದೆ. ಈ ಬಾರಿ ದಕ್ಷಿಣ ಪರ್ಯಾಯ ದ್ವೀಪ, ಪೂರ್ವ, ಈಶಾನ್ಯ ಮತ್ತು ಕೇಂದ್ರ ಭಾರತಗಳಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ.
ಭಾರತದಲ್ಲಿ ಮಾನ್ಸೂನ್ ಮಳೆ ಹೆಚ್ಚಾಗಿ ಬೀಳುವ ತಿಂಗಳು ಜೂನ್ ಆಗಿದೆ. ಈ ತಿಂಗಳಿನಲ್ಲಿ ಮಳೆಯ ಏರಿಳಿತ ಹೆಚ್ಚಾಗಿರುತ್ತದೆ. ಜುಲೈನಲ್ಲಿ ಮಳೆ ಹೆಚ್ಚಾಗಬಹುದು ಎಂದು ಹವಾಮಾನ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೆಹಲಿಯಲ್ಲಿ ಈ ವರ್ಷದ ಜೂನ್‌ನಲ್ಲಿ ಶೇ.-70ರಷ್ಟುಮಳೆ ಕೊರತೆಯಾಗಿದೆ. ಉಳಿದಂತೆ ಗುಜರಾತ್‌ನಲ್ಲಿ ಶೇ.-54, ಜಾರ್ಖಂಡ್‌ನಲ್ಲಿ ಶೇ.-49, ಒಡಿಶಾದಲ್ಲಿ ಶೇ.-37, ಹರ್ಯಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಶೇ.-34, ಮಹಾರಾಷ್ಟ್ರದಲ್ಲಿ ಶೇ.-30, ಉತ್ತರಾಖಂಡದಲ್ಲಿ ಶೇ.-29, ಮಿಜೋರಾಂನಲ್ಲಿ ಶೇ.-26ರಷ್ಟುಮಳೆಯಾಗಿದೆ.
