* ಈಗಾಗಲೇ 12 ದೇಶಗಳಲ್ಲಿ ಮಂಕಿಪಾಕ್ಸ್‌ನ ಸುಮಾರು 92 ಪ್ರಕರಣಗಳು* ಮಂಕಿಪಾಕ್ಸ್‌ ಭೀತಿ: ಸೋಂಕಿನ ಮೇಲೆ ನಿಗಾಗೆ ಕೇಂದ್ರ ಸೂಚನೆ* ವಿದೇಶದಿಂದ ಬಂದವರ ತಪಾಸಣೆಗೆ ಚಿಂತನೆ

ನವದೆಹಲಿ(ಮೇ23): ಈಗಾಗಲೇ 12 ದೇಶಗಳಲ್ಲಿ ಮಂಕಿಪಾಕ್ಸ್‌ನ ಸುಮಾರು 92 ಪ್ರಕರಣಗಳನ್ನು ಖಚಿತವಾಗಿದೆ. ಹೀಗಾಗಿ ಭಾರತದಲ್ಲೂ ಈ ಬಗ್ಗೆ ನಿಗಾ ಇರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಸಂಸ್ಥೆ (ಎನ್‌ಸಿಡಿಸಿ) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಈ ಬಗ್ಗೆ ಸೂಚನೆ ನೀಡಿರುವ ಸಚಿವಾಲಯ, ಮಂಕಿಪಾಕ್ಸ್‌ ಹರಡುವಿಕೆಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಬೇಕು. ಸೋಂಕು ಹೆಚ್ಚಳವಾದರೆ ಸೋಂಕು ಪೀಡಿತ ದೇಶಗಳಿಂದ ಬಂದ ಜನರನ್ನು ದೇಶ ಪ್ರವೇಶಕ್ಕೂ ಮುನ್ನ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚಿಸಿದೆ.

ಡಬ್ಲ್ಯುಎಚ್‌ಒ ಪ್ರಕಾರ ಮಂಕಿಪಾಕ್ಸ್‌ ಸೋಂಕು ಸ್ಥಳೀಯವಾಗಿದ್ದು, ಕೆಲವು ದೇಶಗಳಲ್ಲಿ ರೋಗಗ್ರಸ್ಥ ಪ್ರಾಣಿಗಳಿಂದಾಗಿ ಜನರಿಗೆ ತಗುಲಿ ಮೈಮೇಲೆ ಬೊಬ್ಬೆ ಏಳುತ್ತವೆ. ಈ ದೇಶಗಳಿಂದ ಮರಳುತ್ತಿರುವ ಜನರಲ್ಲೂ ಸೋಂಕಿನ ಲಕ್ಷಣಗಳು ಕಂಡುಬರುತ್ತಿದೆ. ಹೀಗಾಗಿ ರೋಗದ ಹರಡುವಿಕೆಯನ್ನು ತಪ್ಪಿಸಲು ವಿದೇಶಗಳಲ್ಲಿನ ಮಂಕಿಪಾಕ್ಸ್‌ ಸೋಂಕಿನ ಸ್ಥಿತಿಯ ಬಗ್ಗೆ ಸತತ ನಿಗಾ ಇರಿಸಬೇಕು. ವಿದೇಶಗಳಿಂದ ಮರಳಿದ ಜನರಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಬೇಕು ಎಂದು ಸಚಿವಾಲಯ ಸೂಚಿಸಿದೆ.

ಯುರೋಪ್‌ನ ಸ್ಲೇನ್‌ ಮತ್ತು ಪೋರ್ಚುಗಲ್‌ನಲ್ಲಿ 40ಕ್ಕೂ ಹೆಚ್ಚು ಮಂಕಿಪಾಕ್ಸ್‌ ಪ್ರಕರಣ ಕಾಣಿಸಿಕೊಂಡಿದೆ. ಜೊತೆಗೆ ಬ್ರಿಟನ್‌, ಅಮೆರಿಕ, ಕೆನಡಾದಲ್ಲೂ ಪ್ರಕರಣಗಳು ದಾಖಲಾಗಿದೆ. ವೈರಸ್‌ನಿಂದ ಕಾಣಿಸಿಕೊಳ್ಳವು ಈ ಸೋಂಕು ಸಾಮಾನ್ಯವಾಗಿ ಹೆಚ್ಚಿನ ಅಪಾಯ ಮಾಡುವುದಿಲ್ಲ. ಸೋಂಕಿತರ ಸಾವಿನ ಪ್ರಮಾಣ ಶೇ.1ರಷ್ಟುಮಾತ್ರ ಇರುತ್ತದೆ. ಆದರೆ ಇದರಲ್ಲೇ ಕೆಲವು ಮಾರಣಾಂತಿಕ ಮಾದರಿಯು ಶೇ.10ರಷ್ಟುಸೋಂಕಿತರ ಸಾವಿಗೆ ಕಾರಣವಾಗಬಲ್ಲಷ್ಟುಅಪಾಯಕಾರಿಯಾಗಿದೆ.

ಏನಿದು ಸೋಂಕು:

ಇದೊಂದು ವೈರಲ್‌ ಸೋಂಕಾಗಿದ್ದು, ಬಹುಪಾಲು ಸಿಡುಬನ್ನು ಹೋಲುತ್ತದೆ. ಮೊದಲ ಬಾರಿಗೆ 1958ರಲ್ಲಿ ಪತ್ತೆಯಾದ ಈ ಸೋಂಕು, 1970ರಲ್ಲಿ ಮೊದಲ ಬಾರಿ ಮಾನವರಲ್ಲಿ ಕಾಣಿಸಿಕೊಂಡಿತ್ತು. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುತ್ತದೆ. ಸೋಂಕಿತ ಪ್ರಾಣಿಗಳು ಕಚ್ಚುವುದರಿಂದ ಅಥವಾ ಅವುಗಳ ರಕ್ತ, ವಿಸರ್ಜಿತ ವಸ್ತುಗಳ ಸಂಪರ್ಕದಿಂದ, ಸೋಂಕಿತ ಪ್ರಾಣಿಗಳ ಮಾಂಸ ತಿನ್ನುವುದರಿಂದ ಈ ವೈರಸ್‌ ಹಬ್ಬಬಹುದು. ಜ್ವರ, ಸ್ನಾಯುಸೆಳೆತ ಮತ್ತು ಚಳಿ ಈ ರೋಗದ ಲಕ್ಷಣಗಳಾಗಿವೆ.

ಡಬ್ಲ್ಯೂಎಚ್‌ಒ ಎಚ್ಚರಿಕೆ:

ಮಂಕಿಪಾಕ್ಸ್‌ ಮೇಲೆ ಗಮನ ಇರಿಸಲಾಗಿದೆ. ಕೋವಿಡ್‌ ನಂತರ ಈ ವೈರಸ್‌ ಜಗತ್ತನ್ನು ಕಾಡಬಹುದು. ಪ್ರಸ್ತುತ ಈ ಸೋಂಕು ಯಾವ ಪ್ರಮಾಣದಲ್ಲಿ ಹಬ್ಬುತ್ತಿದೆ ಮತ್ತು ಇದರಿಂದ ಉಂಟಾಗುವ ಪರಿಣಾಮಗಳನ್ನು ಪತ್ತೆ ಹಚ್ಚಲು ಅಧ್ಯಯನ ಆರಂಭಿಸಲಾಗಿದೆ. ಮೇ ಆರಂಭದಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಯಾವ ಮೂಲದಿಂದ ಮನುಷ್ಯರಲ್ಲಿ ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಈ ಸೋಂಕು ಲೈಂಗಿಕ ಜಾಲದಿಂದ ಹಬ್ಬುತ್ತಿದೆ ಎಂದು ಎಚ್ಚರಿಕೆ ನೀಡಿದೆ.