ಈ ಹಿಂದೆ ವಿವಿಧ ಏಜೆನ್ಸಿಗಳು ಈ ರೀತಿ ಅನ ಧಿಕೃತವಾಗಿ ಸಂದೇಶಗಳನ್ನು ಕದ್ದು ನೋಡಿ ಆ ದಾಖಲೆಗಳನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದು ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಕೇಂದ್ರದ ಈ ಹೊಸ ನೀತಿ ಗೌಪ್ಯತೆಯ ಹಕ್ಕಿನ ವಿಚಾರದಲ್ಲಿ ಚರ್ಚೆ ಹುಟ್ಟು ಹಾಕುವ ಸಾಧ್ಯತೆ ಇದೆ. 

ನವದೆಹಲಿ(ಡಿ.08): ಫೋನ್ ಕದ್ದಾಲಿಕೆ ನಿಯಮಗಳ ಮಾದರಿಯಲ್ಲೇ ಇದೀಗ ಕೇಂದ್ರ ಸರ್ಕಾರ ಸಾರ್ವಜನಿಕರ ಸಂದೇಶಗಳ ಮೇಲೆ ಗರಿಷ್ಠ 6 ತಿಂಗಳವರೆಗೆ ನಿಗಾ ಇಡುವ ಹೊಸ ದೂರಸಂಪರ್ಕ (ಸಂದೇಶಗಳ ಕಾನೂನಾತ್ಮಕ ನಿಗಾ ಇಡುವ ಸುರಕ್ಷತೆ ಮತ್ತು ಪ್ರಕ್ರಿಯೆಗಳು)ನಿಯಮಗಳು-2024 ಅನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಈ ಹೊಸ ನೀತಿಯು ಕಾನೂನು ಪಾಲನಾ ಸಂಸ್ಥೆಗಳು ಮತ್ತು ಭದ್ರತಾ ಏಜೆನ್ಸಿಗಳಿಗೆ ಕೆಲ ನಿರ್ದಿಷ್ಟ ಉದ್ದೇಶಗಳಿಗೆ ಮತ್ತು ನಿರ್ದಿಷ್ಟ ಅವಧಿವರೆಗೆ ಯಾವುದೇ ವ್ಯಕ್ತಿಯ ಸಂದೇಶದ ಮೇಲೆ ನಿಗಾ ಇಡಲು ಕಾನೂನು ರೀತಿ ಅವಕಾಶ ಮಾಡಿಕೊಡುತ್ತದೆ. 

Add Asianetnews Kannada as a Preferred SourcegooglePreferred

ಅನುಮತಿ ಸಿಕ್ಕ ದಿನದಿಂದ 6 ತಿಂಗಳವರೆಗೆ ಮೆಸೇಜ್ ಮೇಲೆ ನಿಗಾಗೆ ಏಜೆನ್ಸಿಗಳಿಗೆ ಅವಕಾಶ ನೀಡಲಾಗಿದೆ ಆ.28ಕ್ಕೆ ಈ ನಿಯಮಗಳಿಗೆ ಆಕ್ಷೇಪ ಕೋರಿ ಕೇಂದ್ರ ಸರ್ಕಾರ ಅಭಿಪ್ರಾಯಗಳಿಗೆ ಆಹ್ವಾನ ನೀಡಿತ್ತು. ಈಗ ಅಭಿಪ್ರಾಯ ಆಲಿಸಿ ಅಧಿಸೂಚನೆ ಹೊರಡಿಸಲಾಗಿದೆ.

ತೆಲಂಗಾಣ ಐಬಿ ಮುಖ್ಯಸ್ಥರೇ ಫೋನ್ ಕದ್ದಾಲಿಕೆ ಕಿಂಗ್‌ಪಿನ್

ಏನಿದೆ ಈ ಹೊಸ ನೀತಿಯಲ್ಲಿ?: 

ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರದ ಗೃಹ ಕಾರ್ಯದರ್ಶಿ ಮತ್ತು ರಾಜ್ಯದಲ್ಲಿ ಮುಖ್ಯಕಾರ್ಯದರ್ಶಿಗಳಿಗೆ ಸಂದೇಶಗಳ ಮೇಲೆ ಕಣ್ಗಾವಲು ಇಡುವ ಆದೇಶ ಹೊರಡಿಸುವ ಅಧಿಕಾರ ಇದೆ. ತುರ್ತು ಸನ್ನಿವೇಶಗಳಲ್ಲಿ ಜಂಟಿ ಕಾರ್ಯದರ್ಶಿ ಅಥವಾ ಇನ್ಸ್‌ಪೆಕ್ಟರ್ ಜನರಲ್ ಮಟ್ಟದ ಅಥವಾ ಅದಕ್ಕಿಂತ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳೂ ಈ ರೀತಿಯ ಆದೇಶ ಹೊರಡಿಸಬಹುದಾಗಿದೆ. ಆದರೆ ಅವರು ಹೊರಡಿಸಿದ ಆದೇಶದ ಕುರಿತು 7 ಕೆಲಸದ ದಿನದೊಳಗೆ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ ಸಕ್ಷಮ ಪ್ರಾಧಿಕಾರವು 7 ಕೆಲಸದ ದಿನದೊಳಗೆ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಹೋದರೆ ನಿಗಾ ಆದೇಶ ತನ್ನಿಂತಾನೆ ರದ್ದಾಗಲಿದೆ. ಜತೆಗೆ ಆ ಮೂಲಕ ಸಂಗ್ರಹಿಸಲಾದ ದಾಖಲೆಗಳನ್ನು ಕೋರ್ಟ್‌ ಸೇರಿದಂತೆ ಎಲ್ಲೂ ಸಾಕ್ಷ್ಯವನ್ನಾಗಿ ಬಳಸುವಂತೆಯೂ ಇಲ್ಲ. 

ಮಾಹಿತಿ ಕಡ್ಡಾಯ: 

ನಿಗಾ ಇಡಲು ಉದ್ದೇಶಿಸಿರುವ ವ್ಯಕ್ತಿಯ ಹೆಸರು ಮತ್ತು ವಿವರಗಳು, ಯಾವ ಅಧಿಕಾರಿಗೆ ಕಣ್ಣಾವಲು ವಹಿಸಲು ಅಧಿಕಾರ ನೀಡಲಾಗಿದೆ ಹಾಗೂ ಈ ರೀತಿ ಸಂಗ್ರಹಿಸಿದ ಮಾಹಿತಿಗಳನ್ನು ಯಾವ ಅವಧಿವರೆಗೆ ಇರಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯನ್ನೂ ಏಜೆನ್ಸಿಗಳು ನೀಡುವುದು ಕಡ್ಡಾಯವಾಗಿದೆ. 

ನಿಗಾ ಆದೇಶವನ್ನು ಕಾರ್ಯರೂಪಕ್ಕಿಳಿಸಲು ಪ್ರತಿ ಏಜೆನ್ಸಿಗಳು ಎಸ್ಪಿ ಹಂತಕ್ಕಿಂತ ಕೆಳಗಿನ ಅಥವಾ ತತ್ಸಮಾನ ಹುದ್ದೆಯ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು, ಅಲ್ಲದೆ ನಿಗಾ ಆದೇಶಗಳ ರೆಫರೆನ್ಸ್ ಸಂಖ್ಯೆ ಮತ್ತು ಆದೇಶಹೊರಡಿಸಿದದಿನಾಂಕ ಅಥವಾ ಅದಕ್ಕೆ ಒಪ್ಪಿಗೆ ಸಿಕ್ಕ ದಿನಾಂಕವನ್ನೊಳಗೊಂಡ ವರದಿಯನ್ನು ಪ್ರತಿ 15 ದಿನಗಳಿಗೊಮ್ಮೆ ಏಜೆನ್ಸಿಗಳು ನೀಡಬೇಕಿದೆ. ಒಂದು ವೇಳೆ ಟೆಲಿಕಮ್ಯುನಿಕೇಷನ್ ಸಂಸ್ಥೆಯ ಸಿಬ್ಬಂದಿಯೇನಾದರೂ ಅನಧಿಕೃತವಾಗಿ ಸಂದೇಶಗಳ ಮೇಲೆ ಕಣ್ಣಾವಲು ಇಟ್ಟರೆ ಈ ನಿಯಮ ಪ್ರಕಾರ ಅದಕ್ಕೆ ಆ ಸಂಸ್ಥೆಯೇ ಹೊಣೆಯಾಗುತ್ತದೆ. 

ಪತ್ನಿಯ ಫೋನ್‌ ಸಂಭಾಷಣೆ ಕದ್ದಾಲಿಸಿ 15 ಕೋಟಿ ರೂ ಲಾಭ ಗಳಿಸಿದ ಪತಿ!

ಮೇಲ್ವಿಚಾರಣೆಗೆ ಸಮಿತಿ ರಚನೆ: 

ಸಂದೇಶಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮೇಲ್ವಿಚಾರಣೆಗೆ ಕೇಂದ್ರ ಮಟ್ಟದಲ್ಲಿ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಪುನರ್‌ ಪರಿಶೀಲನಾ ಸಮಿತಿಯೊಂದನ್ನು ಸ್ಥಾಪಿಸಬೇಕು. ರಾಜ್ಯ ಸರ್ಕಾರಗಳು ಕೂಡ ಕಾನೂನು ಮತ್ತು ಆಡಳಿತಾತ್ಮಕ ಇಲಾಖೆ ಹಿರಿಯ ಅಧಿಕಾರಿ ಗಳನ್ನೊಳಗೊಂಡ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿ ಸ್ಥಾಪಿಸುವುದು ಕಡ್ಡಾಯವಾಗಿದೆ.

ಗೌಪ್ಯತೆಯ ಹಕ್ಕು ಉಲ್ಲಂಘನೆ ಭೀತಿ 

ಈ ಹಿಂದೆ ವಿವಿಧ ಏಜೆನ್ಸಿಗಳು ಈ ರೀತಿ ಅನ ಧಿಕೃತವಾಗಿ ಸಂದೇಶಗಳನ್ನು ಕದ್ದು ನೋಡಿ ಆ ದಾಖಲೆಗಳನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದು ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಕೇಂದ್ರದ ಈ ಹೊಸ ನೀತಿ ಗೌಪ್ಯತೆಯ ಹಕ್ಕಿನ ವಿಚಾರದಲ್ಲಿ ಚರ್ಚೆ ಹುಟ್ಟು ಹಾಕುವ ಸಾಧ್ಯತೆ ಇದೆ.