ಆಲ್ಟ್ ನ್ಯೂಸ್‌ನ ಜುಬೇರ್‌ಗೆ ಪಾಕ್, ಸಿರಿಯಾ, ಗಲ್ಫ್ ರಾಷ್ಟ್ರಗಳ ದೇಣಿಗೆ!
* ಆಲ್ಟ್ ನ್ಯೂಸ್ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಬಗ್ಗೆ ಸಾಕಿಂಗ್ ಮಾಹಿತೊ
* ಜುಬೇರ್‌ಗೆ ಪಾಕ್, ಸಿರಿಯಾದಿಂದ ದೇಣಿಗೆ
* ಕೋರ್ಟ್‌ಗೆ ದಿಲ್ಲಿ ಪೊಲೀಸ್ ಹೇಳಿಕೆ
* ಜುಬೇರ್ ಜಾಮೀನು ಅರ್ಜಿ ವಜಾ
* 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ
ನವದೆಹಲಿ(ಜು.03): ಆಲ್ಟ್ ನ್ಯೂಸ್ ಸಂಸ್ಥಾಪಕ, ಪತ್ರಕರ್ತ ಮೊಹಮ್ಮದ್ ಜುಬೇರ್ ಪಾಕಿಸ್ತಾನ, ಸಿರಿಯಾ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ಲಕ್ಷಾಂತರ ರುಪಾಯಿ ದೇಣಿಗೆ ಸ್ವೀಕರಿಸಿದ್ದನ್ನು ದೆಹಲಿ ಪೊಲೀಸರು ಶನಿವಾರ ಬಯಲಿಗೆಳೆದಿದ್ದಾರೆ.
ಜುಬೇರ್ ಅವರ ಆಲ್ಟ್ ನ್ಯೂಸ್‌ನ ಮಾತೃಸಂಸ್ಥೆಯಾದ ಪ್ರಾವ್ಡಾ ಮೀಡಿಯಾಗೆ ಪಾಕಿಸ್ತಾನ, ಸಿರಿಯಾ ಸೇರಿದಂತೆ ವಿದೇಶಿ ಮೂಲಗಳಿಂದ 2 ಲಕ್ಷ ರು. ದೇಣಿಗೆ ಬಂದಿದೆ. ಆದರೆ ಹಣಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಜುಬೇರ್ ಅಳಿಸಿಹಾಕಿದ್ದಾರೆ. ಹೀಗಾಗಿ ಈ ಹಣದ ಮೂಲದ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೀಗಾಗಿಯೇ ಜುಬೇರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಿದ್ದರು. ಆದ್ದರಿಂದ ದಿಲ್ಲಿ ನ್ಯಾಯಾಲಯ ಜುಬೇರ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.
‘ಹಿಂದೂಗಳ ಭಾವನೆ ನೋಯಿಸುವಂತಹ ಟ್ವೀಟ್ ಮಾಡಿದ ಆರೋಪದ ಮೇಲೆ ಜುಬೇರ್ ಅವರನ್ನು ಬಂಧಿಸಲಾಗಿತ್ತು. ಆದರೆ ಜುಬೇರ್ ಪಾಕಿಸ್ತಾನ, ಸಿರಿಯಾದಿಂದ ದೇಣಿಗೆ ಪಡೆದಿದ್ದು ತನಿಖೆಯ ವೇಳೆ ಬೆಳಕಿಗೆ ಬಂದಿದ್ದು, ಇದು ಕೇವಲ ಟ್ವೀಟ್ ಪ್ರಕರಣವಾಗಿ ಉಳಿದಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.