ಅಹಮದಾಬಾದ್(ನ.09)‌: ಗುಜರಾತಿನ ಭಾವನಗರದ ಸಾರಿಗೆ ಸಂಸ್ಥೆಯ ಮಾಲೀಕನೊಬ್ಬ ತನ್ನಲ್ಲಿರುವ 6 ಟ್ರಕ್‌ಗಳಿಗೆ ಕೇವಲ 8 ಮಂದಿ ಚಾಲಕರನ್ನು ನೇಮಿಸಿಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ಹೊರಹಾಕಿರುವ ಪ್ರಸಂಗ ಶನಿವಾರ ನಡೆದಿದೆ.

ಸೂರತ್‌ನ ಹಜಾರಿಯಾ ಮತ್ತು ಭಾವನಗರದ ಘೋಹಾದ ಮಧ್ಯೆ ರೋಪಾಕ್ಸ್‌ ಫೆರ್ರಿ ಸೇವೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಮೋದಿ, ಸಾರಿಗೆ ಸಂಸ್ಥೆಯ ಮಾಲಿಕರ ಜೊತೆ ಕೆಲ ಹೊತ್ತು ಸಂವಾದ ನಡೆಸಿದರು.

ಈ ವೇಳೆ ಭಾವನಗರದಲ್ಲಿ ಸಾರಿಗೆ ಉದ್ದಿಮೆ ನಡೆಸುತ್ತಿರುವ ಆಸಿಫ್‌ ಸೋಲಂಕಿ ಅವರ ಬಳಿ ನಿಮ್ಮ ಬಳಿಕ ಎಷ್ಟು ಟ್ರಕ್‌ ಟ್ರಕ್‌ಗಳು ಹಾಗೂ ಚಾಲಕರು ಇದ್ದಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಆಸಿಫ್‌ ಸೋಲಂಕಿ ತಮ್ಮ ಬಳಿ 6 ಟ್ರಕ್‌ಗಳು ಹಾಗೂ 8 ಮಂದಿ ಚಾಲಕರು ಇದ್ದಾರೆ ಎಂದು ಹೇಳಿದ್ದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೋದಿ, ಚಾಲಕರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಳ್ಳುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. 6 ಟ್ರಕ್‌ಗಳಿಗೆ ಕನಿಷ್ಠ 12 ಚಾಲಕರು ಇರಲೇ ಬೇಕು. ಉಳಿದ ಚಾಲಕರನ್ನು ನೇಮಿಸಿಕೊಳ್ಳಿ ಎಂದು ಸೂಚನೆ ನೀಡಿದರು.