ನವದೆಹಲಿ(ಡಿ.25): ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಸುಮಾರು ಒಂದು ತಿಂಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಪ್ರತಿಭಟಿಸುತ್ತಿರುವ ಬೆನ್ನಲ್ಲೇ 6 ರಾಜ್ಯಗಳ ರೈತರೊಂದಿಗೆ ಪ್ರಧಾನಿ ಮೋದಿ ಶುಕ್ರವಾರ ಸಂವಾದ ನಡೆಸಲಿದ್ದಾರೆ. ಡಿ.25ರಂದು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿಯಲ್ಲಿ 9 ಕೋಟಿ ರೈತರಿಗೆ ಕೇಂದ್ರ ಸರ್ಕಾರ ಮುಂದಿನ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದು, ಆನ್‌ಲೈನ್‌ ಮೂಲಕ ನಡೆಯುವ ಈ ಕಾರ‍್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಈ ನಡುವೆ ರೈತರ ಪ್ರತಿಭಟನೆ ಕೇಂದ್ರ ಸರ್ಕಾರದ ಪಾಲಿಗೆ ಭಾರೀ ಸಮಸ್ಯೆಯಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ, ಶುಕ್ರವಾರದ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಕಾಯ್ದೆ ಸಮರ್ಥನೆಯ ವೇದಿಕೆಯಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರಪತಿಗೆ ಕಾಂಗ್ರೆಸ್‌ ದೂರು

ಈ ಹಿನ್ನೆಲೆಯಲ್ಲಿ ಈ ಸಂವಾದ ಕಾರ್ಯಕ್ರಮವನ್ನು ದೇಶಾದ್ಯಂತ 19000ಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಿ, ಅದರಲ್ಲಿ ಕನಿಷ್ಠ 1 ಕೋಟಿ ರೈತರು ನೇರವಾಗಿ ಭಾಗಿಯಾಗುವಂತೆ ಮತ್ತು 5 ಕೋಟಿ ರೈತರು ಸಂವಾದ ಕಾರ್ಯಕ್ರಮವನ್ನು ಆಲಿಸುವಂತೆ ಬಿಜೆಪಿ ವ್ಯವಸ್ಥೆ ಮಾಡಿಕೊಂಡಿದೆ. ಅಲ್ಲದೆ ಕೇಂದ್ರ ಸರ್ಕಾರದ ಸಚಿವರು, ಬಿಜೆಪಿ ನಾಯಕರು, ರಾಜ್ಯಗಳಲ್ಲಿನ ಬಿಜೆಪಿ ನಾಯಕರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಿದ್ದಾರೆ.

ಹಣ ಬಿಡುಗಡೆ: ಕಿಸಾನ್‌ ಸಮ್ಮಾನ್‌ ಯೋಜನೆಯ 9 ಕೋಟಿ ರೈತ ಫಲಾನುಭವಿ ಕುಟುಂಬಗಳಿಗೆ 18,000 ಕೋಟಿ ರು. ಬಿಡುಗಡೆ ಮಾಡಲಿದ್ದಾರೆ. ಈ ಯೋಜನೆಯಡಿ ಅರ್ಹ ರೈತರಿಗೆ ತಲಾ 2000 ರು.ನಂತೆ ವಾರ್ಷಿಕ 6000 ರು.ಗಳನ್ನು ಸರ್ಕಾರ ವಿತರಿಸುತ್ತದೆ.